ಭಕ್ತರಿಗೆ ಸಂತಸದ ಸುದ್ದಿ: ಜಾತ್ರೆ, ಧಾರ್ಮಿಕ ಉತ್ಸವಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್!
ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲ ದೇವಾಲಯಗಳು ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಜಾತ್ರೆ, ಉತ್ಸವ, ವಿಶೇಷ ಪೂಜೆ, ಅನ್ನದಾಸೋಹ, ಪ್ರಸಾದ ವಿತರಣೆಗೆ ವಿಧಿಸಿದ್ದ ನಿರ್ಬಂಧಗಳನ್ನು ತೆರವುಗೊಳಿಸಿ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ.
ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿನ ಎಲ್ಲ ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಜಾತ್ರೆ ಮತ್ತು ರಥೋತ್ಸವ ಸೇರಿದಂತೆ ಎಲ್ಲ ಧಾರ್ಮಿಕ ಆಚರಣೆಗಳಿಗೆ ಮುಜರಾಯಿ ಇಲಾಖೆ ಅನುಮತಿ ನೀಡಿದ್ದು ಮುಂಜಾಗ್ರತಾ ಕ್ರಮ ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ.
ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಮಂಗಳವಾರ ಹೊರಡಿಸಿರುವ ಆದೇಶದಂತೆ ಜಾತ್ರೆ, ಉತ್ಸವ, ಅನ್ನದಾಸೋಹ, ವಿಶೇಷ ಪೂಜೆ ಮತ್ತು ಪ್ರಸಾದ ವಿತರಣೆಯಂತಹ ಧಾರ್ಮಿಕ ಚಟುವಟಿಕೆಗಳಿಗೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ.
2020ರ ಮಾರ್ಚ್ ತಿಂಗಳಿನಿಂದಲೂ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ ದೇವಾಲಯಗಳಲ್ಲಿ ಈ ಹಿಂದಿನಂತೆ ಸಂಪ್ರದಾಯಗಳಿಗೆ ಅನುಗುಣವಾಗಿ ಉತ್ಸವ ಮತ್ತು ಪೂಜಾ ಕೈಂಕರ್ಯಗಳು ನಡೆದಿಲ್ಲ.
ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ, ರಾಜ್ಯ ಸರ್ಕಾರಗಳು, ಜಿಲ್ಲಾಧಿಕಾರಿಗಳು ಹೊರಡಿಸಿರುವ ಮತ್ತು ಹೊರಡಿಸಲಿರುವ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಈ ಎಲ್ಲ ಕಾರ್ಯಗಳನ್ನೂ ನಡೆಸಬೇಕು ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.