ದ.ಕ. 200 ವಿದ್ಯಾರ್ಥಿಗಳಲ್ಲಿ ಕೊರೋನಾ – ಹೊಸ ಮಾದರಿಯ ಸೋಂಕು ಪತ್ತೆ?
ಮಂಗಳೂರು: ಕರಾವಳಿಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖ ಕಂಡೆದೆ ಎಂದು ನಿಟ್ಟುಸಿರು ಬಿಡುವ ಮೊದಲೇ ಮತ್ತೊಂದು ಆಘಾತಕಾರಿ ಸುದ್ದಿಯೊಂದು ವರದಿಯಾಗಿದೆ. ಕರಾವಳಿ ಭಾಗದಲ್ಲಿ ಕೊರೊನಾ ವೈರಸ್ ಮತ್ತೆ ಅಬ್ಬರಿಸೋದಕ್ಕೆ ಶುರುಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 200 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಮಾದರಿಯ ಕೊರೊನಾ ಸೋಂಕಿನ ಪತ್ತೆಗೆ ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದೆ ಎಂಬ ಸುದ್ದಿಯೊಂದು ವರದಿಯಾಗಿದೆ. ನೆರೆಯ ರಾಜ್ಯ ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ಅಲ್ಲಿಂದ ವಿದ್ಯಾಭ್ಯಾಸಕ್ಕಾಗಿ ಮಂಗಳೂರಿಗೆ ಆಗಮಿಸುತ್ತಿರುವ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೀಗ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳ ಗಂಟಲ ದ್ರವದ ಮಾದರಿಯನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಲು ನಿರ್ಧರಿಸಲಾಗಿದೆ. ದೇಶಕ್ಕೆ ಮರಳಿದ ಹಲವು ಜನರಲ್ಲಿ ಈಗಾಗಲೇ ಇಂಗ್ಲೆಂಡ್ ಮಾದರಿಯ ಕೊರೋನಾ ಸೋಂಕು ಪತ್ತೆಯಾಗಿದೆ. ಅದರಲ್ಲೂ ಕೇರಳದಿಂದ ಬಂದಿರುವ ವಿದ್ಯಾರ್ಥಿಗಳೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ಇಂತಹ ನಿರ್ಧಾರಕ್ಕೆ ಬಂದಿದೆ ಎಂದು ವರದಿಯಾಗಿದೆ. ಸದ್ಯ ಕೋವಿಡ್ ನಿಂದ ಉಂಟಾಗಬಹುದಾದ ಅಪಾಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಲಸಿಕಾ ವಿತರಣೆ ಆರಂಭವಾಗಿದ್ದು, ಮೊದಲ ಹಂತದ ಲಸಿಕಾ ಕಾರ್ಯವನ್ನು ಮುಗಿಸಿದ್ದು, ಎರಡನೇ ಹಂತದ ಲಸಿಕೆ ನೀಡಲು ಮುಂದಾಗಿರುವುದು ಕೊಂಚ ಸಮಾಧಾನ ತಂದಿದೆ. |