ಮೊದಲ ಟೆಸ್ಟ್: ಇಂಗ್ಲೆಂಡ್ ವಿರುದ್ದ ಭಾರತಕ್ಕೆ 227 ರನ್’ಗಳ ಹೀನಾಯ ಸೋಲು
ಚೆನ್ನೈ: ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಜಯ ಸಾಧಿಸಿ ತವರಿಗೆ ಮರಳಿದ್ದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲೇ ಹೀನಾಯ ಸೋಲು ಕಂಡಿದೆ.
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 420 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 192 ರನ್ಗಳಿಗೆ ಆಲೌಟ್ ಆಯಿತು. ಆ ಮೂಲಕ 227 ರನ್ ಗಳ ಹೀನಾಯ ಸೋಲುಕಂಡಿತು. ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ.
ನಾಲ್ಕನೇ ದಿನದಾಟದ ಅಂತ್ಯಕ್ಕೆ 39 ರನ್ಗಳಿಗೆ 1 ವಿಕೆಟ್ ಕಳೆದುಕೊಂಡಿದ್ದ ಭಾರತ, ಇಂದು ಜ್ಯಾಕ್ ಲೀಚ್ ಮತ್ತು ಜೇಮ್ಸ್ ಆಂಡರ್ಸನ್ ಬೌಲಿಂಗ್ ದಾಳಿಗೆ ತತ್ತರಿಸಿತು. ಶುಭ್ ಮನ್ ಗಿಲ್ (50 ರನ್) ಮತ್ತು ನಾಯಕ ವಿರಾಟ್ ಕೊಹ್ಲಿ (72 ರನ್) ಅವರನ್ನು ಹೊರತುಪಡಿಸಿ ಇನ್ನಾವುದೇ ಆಟಗಾರ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನೆಲೆಯೂರುವ ಪ್ರಯತ್ನ ಮಾಡಲಿಲ್ಲ. ದಿನದಾಟದ ಆರಂಭದಲ್ಲೇ 15 ರನ್ ಗಳಿಸಿದ್ದ ಚೇತೇಶ್ವರ ಪೂಜಾರ ಅವರನ್ನು ಜಾಕ್ ಲೀಚ್ ಔಟ್ ಮಾಡಿದರು. ಬಳಿಕ ಗಿಲ್ ಜೊತೆಗೂಡ ನಾಯಕ ಕೊಹ್ಲಿ ರಕ್ಷಣಾತ್ಮಕ ಆಟಕ್ಕೆ ಮುಂದಾದರು. ಮತ್ತೊಂದು ಬದಿಯಲ್ಲಿ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಂತು ಆಡಿ ಅರ್ಧಶತಕ ಗಳಿಸಿದ್ದ ಶುಭ್ ಮನ್ ಗಿಲ್ ರನ್ನು ಜೇಮ್ಸ್ ಆಂಡರ್ಸನ್ ಔಟ್ ಮಾಡಿದರು. ಇದರೊಂದಿಗೆ ಭಾರತ ಅಕ್ಷರಶಃ ಒತ್ತಡಕ್ಕೆ ಸಿಲುಕಿತು. ಇದರ ಬೆನ್ನಲ್ಲೇ ಆಗತಾನೆ ಕ್ರೀಸ್ ಗೆ ಬಂದಿದ್ದ ರಹಾನೆ ಅವರನ್ನೂ ಕೂಡ ಆ್ಯಂಡರ್ಸನ್ ಔಟ್ ಮಾಡುವ ಮೂಲಕ ಭಾರತಕ್ಕೆ ಡಬಲ್ ಆಘಾತ ನೀಡಿದರು.
ಬಳಿಕ ಕ್ರೀಸ್ ಗೆ ಪಂತ ಆಟ ಕೇವಲ 11 ರನ್ ಗೆ ಸೀಮಿವಾಗಿತ್ತು. ಪಂತ್ ಕೂಡ ಆ್ಯಂಡರ್ಸನ್ ಬೌಲಿಂಗ್ ನಲ್ಲಿ ರೂಟ್ ಕೆ ಕ್ಯಾಚ್ ನೀಡಿ ಔಟ್ ಆದರು. ಬಳಿಕ ವಾಷಿಂಗ್ಟನ್ ಸುಂದರ್ ರನ್ನು ಡೋಮ್ ಬೆಸ್ ಶೂನ್ಯಕ್ಕೆ ಔಟ್ ಮಾಡಿದರು. ಬಳಿಕ ಕೊಹ್ಲಿ ಮತ್ತು ಅಶ್ವಿನ್ ಇಂಗ್ಲೆಂಡ್ ಬೌಲರ್ ಗಳಿಗೆ ಕೊಂಚ ಪ್ರತಿರೋಧ ಒಡ್ಡಿದರು. ಕೊಹ್ಲಿ ಮತ್ತು ಅಶ್ವಿನ್ ನಡುವೆ 7ನೇ ವಿಕೆಟ್ಗೆ 54 ರನ್ಗಳ ಜೊತೆಯಾಟ ಬಂದಿತು.
ಈ ಹಂತದಲ್ಲಿ 9ರನ್ ಗಳಿಸಿದ್ದ ಅಶ್ವಿನ್ ರನ್ನು ಜಾಕ್ ಲೀಚ್ ಔಟ್ ಮಾಡಿದರು. ಬಳಿಕ 72 ರನ್ ಗಳಿಸಿ ಭಾರತದ ಇನ್ನಿಂಗ್ಸ್ ಗೆ ಆಸರೆಯಾಗಿದ್ದ ನಾಯಕ ಕೊಹ್ಲಿ ಬೆನ್ ಸ್ಟೋಕ್ಸ್ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರು. ಬಳಿಕ ಶಾಬಾಜ್ ನದೀಂ ಶೂನ್ಯಕ್ಕೆ ಔಟ್ ಆದರೆ, ಜಸ್ ಪ್ರೀತ್ ಬುಮ್ರಾ 4ರನ್ ಗಳಿಸಿ ಜೋಫ್ರಾ ಆರ್ಚರ್ ಗೆ ವಿಕೆಟ್ ಒಪ್ಪಿಸಿದರು. 5 ರನ್ ಗಳಿಸಿದ್ದ ಇಶಾಂತ್ ಶರ್ಮಾ ಅಜೇಯರಾಗಿ ಉಳಿದರು. ಆ ಮೂಲಕ ಭಾರತ ತಂಡ 227 ರನ್ ಗಳ ಹೀನಾಯ ಸೋಲು ಕಂಡಿತು.
ಇನ್ನು ಇಂಗ್ಲೆಂಡ್ ಪರ ಜ್ಯಾಕ್ ಲೀಚ್ 4 ವಿಕೆಟ್ ಪಡೆದರೆ ಜೇಮ್ಸ್ ಆಂಡರ್ಸನ್ 3 ವಿಕೆಟ್ ಪಡೆದರು. ಜೋಫ್ರಾ ಆರ್ಚರ್, ಡಾಮ್ ಬೆಸ್, ಬೆನ್ ಸ್ಟೋಕ್ಸ್ ತಲಾ ಒಂದೊಂದು ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.