ಯುವ ಸ್ಪಂದನ ಕೇಂದ್ರದಿಂದ ಯುವಜನರಿಗೆ ವೃತ್ತಿಪರ ಮಾರ್ಗದರ್ಶನಕ್ಕೆ ಆದ್ಯತೆ: ಜಿಲ್ಲಾಧಿಕಾರಿ
ಉಡುಪಿ ಫೆ. 9: ಪಟ್ಟಣಗಳ ಶಾಲಾ ಕಾಲೇಜು ಮಾತ್ರವಲ್ಲದೇ ಗ್ರಾಮ ಮಟ್ಟದ ಶಾಲಾ
ಕಾಲೇಜು, ವಿದ್ಯಾರ್ಥಿ ವಸತಿ ನಿಲಯ, ಸಂಘ ಸಂಸ್ಥೆಗಳ ಯುವ ಜನರಿಗೆ, ಯುವ ಸ್ಪಂದನ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿ ಸದೃಢ ಸಮಾಜ ನಿರ್ಮಾಣಕ್ಕೆ ಒತ್ತು ಕೊಡಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸರಕಾರದ ಯೋಜನೆಯಾದ ಯುವಸ್ಪಂದನ ಕಾರ್ಯಕ್ರಮದ ಸಲಹಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ವೃತ್ತಿಪರ ಮಾರ್ಗದರ್ಶನದ ಪೋಸ್ಟರ್ಗಳನ್ನು ಶಾಲಾ ಕಾಲೇಜು, ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಹಚ್ಚಬೇಕೆಂದು ಸೂಚಿಸಿದರು. ನೆಹರೂ ಯುವ ಕೇಂದ್ರ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ
ಕಲ್ಯಾಣ ಇಲಾಖೆ ಹಾಗೂ ಸರಕಾರೇತರ ಸಂಸ್ಥೆಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅರಿವು ಕಾರ್ಯಕ್ರಮ ಮಾಡುವಂತೆ ಸೂಚಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ ಮಾತನಾಡಿ, ಯುವ ಸ್ಪಂದನ ಕೇಂದ್ರವು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬೆಂಗಳೂರಿನ ನಿಮ್ಹಾನ್ಸ್ನ ಎಪಿಡಿಮಿಯಾಲಜಿ ವಿಭಾಗದ ಆಶ್ರಯದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 2014 ರಿಂದ ಅನುಷ್ಠಾನಗೊಂಡಿದೆ. ಯುವಜನರ ಅವಶ್ಯಕತೆಗಳನ್ನು ಪೂರೈಸಲು ಮತ್ತು ಯುವ ಜನರಿಗೆ ಒಂದು ಸಮಗ್ರ
ಭಾವನಾತ್ಮಕ, ಮಾನಸಿಕ ಮತ್ತು ಮನೋಸಾಮಾಜಿಕ ಬೆಂಬಲ ಸೇವೆ ನೀಡಲು ಯುವ ಜನರೇ ಅಭಿವೃದ್ಧಿಪಡಿಸಿದ ಕಾರ್ಯಕ್ರಮವೇ ಯುವ ಸ್ಪಂದನ ಎಂದರು.
ಯುವ ಸ್ಪಂದನ ಕೇಂದ್ರದ ಕ್ಷೇತ್ರ ಸಂಪರ್ಕಾಧಿಕಾರಿ ಸುಜನ್, 15 ರಿಂದ 35 ವರ್ಷ ವಯೋಮಿತಿಗಳ ಯುವ ಜನರಿಗೆ ಆರೋಗ್ಯ ಮತ್ತು ಜೀವನ ಶೈಲಿ, ಶಿಕ್ಷಣ ಮತ್ತು ವೃತ್ತಿ ವಿಷಯಗಳು, ಸಂಬAಧಗಳು, ವ್ಯಕ್ತಿತ್ವ ಬೆಳವಣಿಗೆ, ಸುರಕ್ಷತೆ, ಲಿಂಗ ಮತ್ತು ಲೈಂಗಿಕತೆ ವಿಷಯಗಳ ಕುರಿತು ಇರುವ ಗೊಂದಲ ಮತ್ತು ಸವಾಲುಗಳಿಗೆ ಮಾರ್ಗದರ್ಶನ ಮತ್ತು ಆಪ್ತ ಸಮಾಲೋಚನೆಯ ಮೂಲಕ ಯುವ ಜನತೆಯನ್ನು ಸದೃಢಗೊಳಿಸುವ ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಲು ಮನವಿ ಮಾಡಿದರು. 2014 ರಿಂದ ಇದುವರೆಗೆ ಉಡುಪಿ ಜಿಲ್ಲೆಯಲ್ಲಿ 436 ಸಂಪನ್ಮೂಲ ಕ್ರೋಢೀಕರಣ, 829
ಅರಿವು ಕಾರ್ಯಕ್ರಮಗಳಲ್ಲಿ ಒಟ್ಟು 5552 ಯುವಕರು ಮತ್ತು 6802 ಯುವತಿಯರು ಭಾಗವಹಿಸಿದ್ದು ಅದರಲ್ಲಿ 401 ಜನರು ಮಾರ್ಗದರ್ಶನ ಪಡೆದಿರುವ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೆ. ಆರ್. ಫಡ್ನೇಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಸುಧೀರ್ ಚಂದ್ರ ಸೂಡ, ಜಿಲ್ಲಾ ಪೋಲಿಸ್ ಇಲಾಖೆಯ ಎನ್.ಜಿ. ಚರಣ್, ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ವಿಲ್ಫೆçಡ್ ಡಿಸೋಜ, ನಗರ ಸಭೆಯ
ಪೌರಾಯುಕ್ತ ಉದಯ ಶೆಟ್ಟಿ ಮತ್ತು ಸಲಹಾ ಸಮನ್ವಯ ಸಮಿತಿ ಸದಸ್ಯರು, ಯುವ ಸ್ಪಂದನ ಕೇಂದ್ರದ ಯುವ ಸಮಾಲೋಚಕಿ ಶ್ಯಾಮಲಾ ಕಿರಣ್, ಯುವ ಪರಿವರ್ತಕ ನರಸಿಂಹ ಗಾಣಿಗ, ಚೇತನ್ ಕುಮಾರ್, ಪಾರ್ಥಸಾರಥಿ ಕುಂಜಾರುಗಿರಿ, ಜ್ಯೋತಿ ಪಿ. ಎನ್. ಉಪಸ್ಥಿತರಿದ್ದರು.