ಉಡುಪಿ: ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ತಡೆ ಸಮಿತಿ ರಚನೆ ಕಡ್ಡಾಯ
ಉಡುಪಿ ಫೆ. 9: ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಕೆಲಸದ ಸ್ಥಳಗಳಲ್ಲಿ
ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವುದು, ನಿವಾರಿಸುವಿಕೆ) ಅಧಿನಿಯಮ 2019 ರಂತೆಎಲ್ಲಾ ಕಚೇರಿ, ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿ ರಚನೆ ಮತ್ತು ವಾರ್ಷಿಕ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ
ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಹೇಳಿದರು.
ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಉಡುಪಿ ತಾಲೂಕಿನ ವಿವಿಧ ಖಾಸಗಿ ಸಂಸ್ಥೆಗಳಿಗೆ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಅಧಿನಿಯಮ 2019 ಕುರಿತು ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಾವುದೇ ಕಚೇರಿ /ಸಂಸ್ಥೆಯಲ್ಲಿ 10 ಕ್ಕಿಂತ ಹೆಚ್ಚು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಲ್ಲಿ ಆಂತರಿಕ ದೂರು ಸಮಿತಿ ರಚನೆ ಕಡ್ಡಾಯವಾಗಿದ್ದು, ಜಿಲ್ಲೆಯಲ್ಲಿ ಬಹುತೇಕ ಕಾರ್ಖಾನೆಗಳು/ ಆಸ್ಪತ್ರೆ/ ವಾಣಿಜ್ಯ ಸಂಸ್ಥೆಗಳಲ್ಲಿ ಸಮಿತಿ ರಚನೆ ಮಾಡದೇ ಇರುವುದು ಮತ್ತು ವಾರ್ಷಿಕ ವರದಿಯನ್ನು ಸಂಬoದಪಟ್ಟ ಅಧಿಕಾರಿಗೆ ಸಲ್ಲಿಸದೇ ಇರುವುದು
ಗಮನಕ್ಕೆ ಬಂದಿದ್ದು, ಸರ್ಕಾರಿ ಸೇರಿದಂತೆ ಎಲ್ಲಾ ಖಾಸಗಿ ಉದ್ಯೋಗದಾತರು ತಮ್ಮ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಸಮಿತಿ ರಚಿಸಿ, ಮಹಿಳೆಯರಿಗೆ ಕೆಲಸದ ಸ್ಥಳಗಳಲ್ಲಿ ನಡೆಯುವ ಲೈಂಗಿಕ ಕಿರುಕುಳ ತಪ್ಪಿಸಿ ಮುಕ್ತ ವಾತಾವರಣದಲ್ಲಿ ಕೆಲಸ ಮಾಡಲು ವ್ಯವಸ್ಥೆ ಕಲ್ಪಿಸಬೇಕು.
ತಪ್ಪಿದ್ದಲ್ಲಿ 50000 ರೂ. ದಂಡ ಪಾವತಿಸಬೇಕಾಗುತ್ತದೆ ಎಂದು ಕಾರ್ಮಿಕ ಅಧಿಕಾರಿ ತಿಳಿಸಿದರು. ಕಾರ್ಮಿಕ ನಿರೀಕ್ಷಕರುಗಳು ಖಾಸಗಿ ಸಂಸ್ಥೆ/ಕಾರ್ಖಾನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಆಂತರಿಕ ದೂರು ಸಮಿತಿ ರಚಿಸಿರುವ ಕುರಿತು ಕಡ್ಡಾಯವಾಗಿ ಪರಿಶೀಲನೆ ನಡೆಸುವಂತೆ ಹಾಗೂ ಎಲ್ಲಾ ಉದ್ಯೋಗದಾತರು ಪ್ರತೀ ವರ್ಷ ಡಿಸೆಂಬರ್ ಅಂತ್ಯಕ್ಕೆ ಸಂಬoದಿಸಿದoತೆ, ತಮ್ಮಲ್ಲಿ ರಚಿಸಲಾಗಿರುವ ಸಮಿತಿ, ಕಂಡು ಬಂದಿರುವ ಪ್ರಕರಣಗಳ ಕುರಿತು ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಾರ್ಮಿಕ ಇಲಾಖೆಗೆ ನಿಗದಿತ ನಮೂನೆಯಲ್ಲಿ ವರದಿಯನ್ನು ಕಡ್ಡಾಯವಾಗಿ ಸಲ್ಲಿಸುವಂತೆ ಕುಮಾರ್ ಸೂಚಿಸಿದರು.
ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವುದು, ನಿವಾರಿಸುವಿಕೆ) ಅಧಿನಿಯಮ 2019 ರ ಕುರಿತು ಮಾಹಿತಿ ನೀಡಿದ ಉಡುಪಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ, ಮನೆ ಕೆಲಸ, ಕಟ್ಟಡ ನಿರ್ಮಾಣ ವಲಯದ ಅಸಂಘಟಿತ ಕಾರ್ಮಿಕರೂ ಸಹ ಈ ಅಧಿನಿಯಮದ ವ್ಯಾಪ್ತಿಗೆ ಬರಲಿದ್ದು, ಕೆಲಸದ ಸ್ಥಳದಲ್ಲಿ 10 ಕ್ಕಿಂತ ಕಡಿಮೆ ಇರುವ ನೌಕರರು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ಸ್ಥಳೀಯ ದೂರು ಸಮಿತಿಗೆ ದೂರು ಸಲ್ಲಿಸಬಹುದು. ಎಲ್ಲಾ ಉದ್ಯೋಗದಾತರು ಸಮಿತಿ ರಚಿಸಿರುವ ಕುರಿತು ಕಚೇರಿಯ ನೋಟೀಸ್ ಬೋರ್ಡ್ನಲ್ಲಿ ಅದರ ಪ್ರತಿ ಹಾಕಬೇಕು. ಸಮಿತಿಯಲ್ಲಿ ಶೇ.50 ಮಹಿಳಾ ಸದಸ್ಯರಿರಬೇಕು, ತಮ್ಮ ಸಂಸ್ಥೆ/ಕಚೇರಿಯಲ್ಲಿ ಪ್ರಕರಣದ ಕುರಿತು ದೂರು ಬಂದಲ್ಲಿ ಸಭೆ ಸೇರಬೇಕು. ಪ್ರಕರಣ ಸಾಬೀತು ಆದಲ್ಲಿ ಆರೋಪಿಗೆ 1 ರಿಂದ 3 ವರ್ಷಗಳ ವರೆಗೆ ಕಠಿಣ ಕಾರಾಗೃಹ ವಾಸ, ದಂಡ ಮತ್ತು ಈ ಎರಡನ್ನೂ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ಮಹಿಳೆಯರು ಘಟನೆ ನಡೆದ 3 ತಿಂಗಳ ಒಳಗೆ ಸಮಿತಿಗೆ ಲಿಖಿತ ದೂರು ಸಲ್ಲಿಸಬೇಕು. ಸಂಸ್ಥೆಯ ಮಾಲೀಕರು/ಮುಖ್ಯಸ್ಥರು ಬಾಧಿತರಿಗೆ ಸೂಕ್ತ ಸಹಾಯ ಒದಗಿಸಬೇಕು ಎಂದು ಹೇಳಿದರು. ಕೆಲಸದ ಸ್ಥಳದಲ್ಲಿ ನಡೆಯಬಹುದಾದ ವಿವಿಧ ರೀತಿಯ ಲೈಂಗಿಕ ಕಿರುಕುಳದ ಸಮಗ್ರ ಮಾಹಿತಿ ನೀಡಿದ ವೀಣಾ, ಅರೋಪ ಸಾಬೀತಾದಲ್ಲಿ ಪ್ರಕರಣದ ಗಂಭೀರತೆಗೆ ಅನುಗುಣವಾಗಿ ವಿಧಿಸಬಹುದಾದ ವಿವಿಧ ದಂಡನೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶೇಷಪ್ಪ, ಕಾರ್ಮಿಕ ನಿರೀಕ್ಷಕರಾದ ಪ್ರವೀಣ್ ಕುಮಾರ್, ಪ್ರಸನ್ನ ಕುಮಾರ್ ಹಾಗೂ ಉಡುಪಿ ತಾಲೂಕಿನ ವಿವಿಧ ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.