ಫೆ.14 -21: ಕಂಗಣಬೆಟ್ಟು ಶ್ರೀಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಪುನಃ ಪ್ರತಿಷ್ಟೆ-ಬ್ರಹ್ಮ ಕುಂಭಾಬಿಷೇಕ

ಉಡುಪಿ: ಕೊಡವೂರಿನ ಕಂಗಣಬೆಟ್ಟು ಕ್ರೋಢಾಶ್ರಮದ ಶ್ರೀ ಅಣ್ಣಪ್ಪ ಪಂಜುರ್ಲಿ ದೈವಸ್ಥಾನ ಇದರ ನವೀಕೃತ ಗರ್ಭಗುಡಿ ಮತ್ತು ಸುತ್ತುಪೌಳಿ ಸಮರ್ಪಣಾ ಪೂರ್ವಕ ಸಪರಿವಾರ ಶ್ರೀ ಬ್ರಹ್ಮ, ಶ್ರೀ ವೀರಭದ್ರ ದೇವರುಗಳ ಪುನಃ ಪ್ರತಿಷ್ಟೆ ಹಾಗೂ ಬ್ರಹ್ಮ ಕುಂಭಾಬಿಷೇಕವು ಫೆ. 14 ರಿಂದ 21ರ ವರೆಗೆ ನಡೆಯಲಿದೆ ಎಂದು ಬ್ರಹ್ಮ ಕಲಶೋತ್ಸವ ಸಮಿತಿ ಹಾಗೂ ಶ್ರೀ ಅಣ್ಣಪ್ಪ ಪಂಜುರ್ಲಿ ದೈವಸ್ಥಾನ ಟ್ರಸ್ಟ್ನ ಅಧ್ಯಕ್ಷ  ಟಿ. ರಾಘವೇಂದ್ರ ರಾವ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,  ಫೆ 14 ರಂದು ಸಭಾ ಕಾರ್ಯಕ್ರಮ ನಡೆಯಲಿದ್ದು, ಈ ದಿನ ಭವ್ಯ ಹೊರೆಕಾಣಿಕೆ ಮೆರವಣಿಗೆ , ಉಗ್ರಾಣ ಮುಹೂರ್ತ, ಭದ್ರತಾ ಕೊಠಡಿ ಉದ್ಘಾಟನೆ, ತುಳುನಾಡ ಪ್ರಾಚೀನ ಸ್ವತ್ತುಗಳ ಪ್ರದರ್ಶನಾಲಯ ಉದ್ಘಾಟನೆ ನಡೆಯಲಿದ್ದು, ಇದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿದೆ. ಫೆ.15 ರಿಂದ ಆರಂಭವಾಗುವ ಧಾರ್ಮಿಕ ಕಾರ್ಯಕ್ರಮಗಳು ಫೆ 21ರ ವರೆಗೆ ನಡೆಯಲಿದೆ. 7 ದಿನಗಳ ಕಾಲ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಬ್ರಹ್ಮಶ್ರೀ ವೇದ ಮೂರ್ತಿ ಪುತ್ತೂರು ಶ್ರೀ ಹಯವದನ ತಂತ್ರಿಗಳ ನೇತೃತ್ವದಲ್ಲಿ ವಿಧಿವಿಧಾನಗಳೊಂದಿಗೆ ನಡೆಯಲಿದೆ.

ಫೆ.17 ರಂದು ಬೆಳಿಗ್ಗೆ ಶ್ರೀ ಬ್ರಹ್ಮ ದೇವರ ಪ್ರತಿಷ್ಠೆ, ಶ್ರೀ ಸಿರಿ, ಅಬ್ಬಗದಾರಗ, ರಕ್ತೇಶ್ವರಿ, ನಂದಿಗೋಣ , ಕ್ಷೇತ್ರಪಾಲ, ಕಲ್ಕುಡ, ಬಬ್ಬರ್ಯ ದೈವಗಳ ಪುನಃ ಪ್ರತಿಷ್ಠೆ ಕಲಶಾಭಿಷೇಕ , ಮಹಾಪೂಜೆ ನಡೆಯಲಿದೆ. ಫೆ. 18 ಮತ್ತು 19 ರಂದು ವಿವಿಧ ಪೂಜೆಗಳು, ಹೋಮಗಳು ನಡೆಯಲಿದೆ. ಫೆ.20 ರಂದು ಬೆಳಿಗ್ಗೆ ಕಲಶಾಭಿಷೇಕ ಪ್ರಾರಂಭವಾಗಲಿದ್ದು, ಶ್ರೀ ಬ್ರಹ್ಮ,  ಶ್ರೀ ವೀರಭದ್ರ ದೇವರು , ಶ್ರೀ ಸಿರಿ, ಅಬ್ಬಗದಾರಗ ದೇವರುಗಳಿಗೆ ಬ್ರಹ್ಮ ಕಲಶಾಭಿಷೇಕ ವ್ಯಾಸ ಪೂಜೆ ಹಾಗೂ ಮಹಾ ಪೂಜೆಗಳು ನೆರವೇರಲಿದೆ. ಇದರೊಂದಿಗೆ ಶ್ರೀ ಬ್ರಹ್ಮ ದೇವರ ದರ್ಶನ ಸೇವೆ, ನೇಮೋತ್ಸವ ನಡೆಯಲಿದೆ. ಫೆ. 21 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ  ಕಲ್ಕುಡ ಹಾಗೂ ಬಬ್ಬರ್ಯ ದೈವಗಳಿಗೆ ನೇಮೋತ್ಸವ ನಡೆಯಲಿದೆ.

ಇನ್ನು ಫೆ .26 ರಂದು ದೈವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಂಭ್ರಮದ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಶ್ರೀ ದೇವಿ ಮಹಾತ್ಮೆ ಕಾಲಮಿತಿ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ತಿಳಿಸಿದರು.  ಈ ಸಂದರ್ಭದಲ್ಲಿ ಕಾರ್ಯದರ್ಶಿ ದಿನೇಶ್ ಶೆಟ್ಟಿಗಾರ್, ಕೋಶಾಧಿಕಾರಿ ರಮೇಶ್ ಸಿ ಬಂಗೇರ, ಗೌರವಾಧ್ಯಕ್ಷರಾದ ಸಂತೋಷ್ ಶೆಟ್ಟಿ, ಪ್ರಶಾಂತ್ ಎಸ್ ಆಚಾರ್ಯ, ಹೊರೆ ಕಾಣಿಕೆ ಸಮಿತಿ ಅಧ್ಯಕ್ಷ ದಿನೇಶ್ ಶೆಟ್ಟಿ ತೆಂಕಮನೆ, ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!