ನಾನು ಎಂದಿಗೂ ಗುಲಾಮಳಾಗುವುದಿಲ್ಲ, ಸಕ್ರಿಯ ರಾಜಕಾರಣದಲ್ಲಿರುತ್ತೇನೆ: ಶಶಿಕಲಾ
ತಿರುಪತೂರು: ನಾನು ಎಂದಿಗೂ ದಬ್ಬಾಳಿಕೆಗೆ ಒಳಗಾಗಿ ಗುಲಾಮಳಾಗುವುದಿಲ್ಲ. ಸಕ್ರಿಯ ರಾಜಕೀಯದಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ ಎಂದು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ಪೂರ್ಣಗೊಳಿಸಿ ಸೋಮವಾರ ತವರು ರಾಜ್ಯ ತಮಿಳುನಾಡಿಗೆ ಮರಳಿದ ನಂತರ ಉಚ್ಚಾಟಿತ ಎಐಎಡಿಎಂಕೆ ನಾಯಕಿ ವಿ ಕೆ ಶಶಿಕಲಾ ಅವರು ಹೇಳಿದ್ದಾರೆ.
ಜೈಲಿನಿಂದ ಬಿಡುಗಡೆಯಾಗಿ,ಕೋವಿಡ್ -19ಗೆ ಚಿಕಿತ್ಸೆ ಪಡೆದ ಬೆಂಗಳೂರಿನಿಂದ ತಮಿಳುನಾಡು ತಲುಪಿದ ನಂತರ ಮೊದಲ ಬಾರಿಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಶಶಿಕಲಾ, ನಾನು ತಮಿಳುನಾಡಿನ ಜನರಿಗೆ ಋಣಿಯಾಗಿದ್ದೇನೆ. ಆದರೆ “ದಬ್ಬಾಳಿಕೆಯಿಂದ” ನಾನು ಹತಾಶಳಾಗುವುದಿಲ್ಲ ಎಂದಿದ್ದಾರೆ.
ಚೆನ್ನೈನ ಎಐಎಡಿಎಂಕೆ ಕೇಂದ್ರ ಕಚೇರಿಗೆ ಭೇಟಿ ನೀಡುತ್ತೀರಾ? ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಯಲಲಿತಾ ಆಪ್ತೆ, “ದಯವಿಟ್ಟು ಕಾದು ನೋಡಿ” ಎಂದಷ್ಟೇ ಹೇಳಿದ್ದಾರೆ.
ನಾನು ಪಕ್ಷದ ಕಾರ್ಯಕರ್ತರಿಗಾಗಿ ಸಕ್ರಿಯ ರಾಜಕಾರಣದಲ್ಲಿರುತ್ತೇನೆ. ತಮಿಳು ನೀತಿ ಮತ್ತು ನಾನು ಕೈಗೊಂಡ ತತ್ವಗಳಿಗೆ ಬದ್ಧನಾಗಿರುತ್ತೇನೆ. ಆದರೆ ದಬ್ಬಾಳಿಕೆಯಿಂದ ನಾನು ಎಂದಿಗೂ ಗುಲಾಮಳಾಗಲು ಸಾಧ್ಯವಿಲ್ಲ” ಎಂದು ತಮ್ಮ ನಿಷ್ಠಾವಂತರಿಗೆ ಶಶಿಕಲಾ ತಿಳಿಸಿದ್ದಾರೆ.
ಇಂದು ಬೆಳಗ್ಗೆ 7.30ಕ್ಕೆ ನಂದಿಬೆಟ್ಟದ ಬಳಿ ಇರುವ ರೆಸಾರ್ಟ್ನಿಂದ ಹೊರಟ ಶಶಿಕಲಾ ಅವರಿಗೆ ತಮಿಳುನಾಡಿನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದ್ದು, ಬೆಂಬಲಿಗರು ಕುಂಬಳಕಾಯಿ ಒಡೆದು, ಕುಣಿದು ಕುಪ್ಪಳಿಸಿ ಸ್ವಾಗತ ಕೋರಿದ್ದಾರೆ.
ಶಶಿಕಲಾ ಜೊತೆ ಜೈಲು ಸೇರಿದ್ದ ಅವರ ಆಪ್ತೆ ಇಳವರಸಿ ಮತ್ತು ಸಂಬಂಧಿ ಟಿ.ಟಿ ದಿನಕರನ್ ಕೂಡ ಜೈಲಿನಿಂದ ರಿಲೀಸ್ ಆಗಿದ್ದು, ಅವರು ಕೂಡ ಇಂದು ಶಶಿಕಲಾ ಅವರೊಂದಿಗೆ ಚೆನ್ನೈಗೆ ತೆರಳುತ್ತಿದ್ದಾರೆ.