ಬೆಲೆ ಏರಿಕೆ, ಕೃಷಿ ಸೆಸ್, ಜಿಎಸ್ಟಿಯಿಂದ ಜನರಿಗೆ ಮತ್ತಷ್ಟು ಸಂಕಷ್ಟ: ಮುದ್ರಾಡಿ ಮಂಜುನಾಥ ಪೂಜಾರಿ
ಹೆಬ್ರಿ: ‘ರೈತ ವಿರೋಧಿ 3 ಕಾಯ್ದೆಗಳನ್ನು ಜಾರಿ ಮಾಡಿ ಬಿಜೆಪಿ ಅವರ ಬದುಕನ್ನು ಕಂಗಾಲು ಮಾಡಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಜನರ ಕಷ್ಟ ಗೊತ್ತಿಲ್ಲ, ಅಡುಗೆ ಅನಿಲ, ಪೆಟ್ರೋಲ್,ಡೀಸೆಲ್ ಇಂಧನಗಳ ಬೆಲೆ ವಿಪರೀತ ಏರಿಕೆ, ಕೃಷಿ ಹೆಸರಿನಲ್ಲಿ ಅಧಿಕ ಸೆಸ್, ಜಿಎಸ್ಟಿ ಸಂಕಷ್ಟಗಳಿಂದ ಜನರನ್ನು ಆರ್ಥಿಕ ಸಮಸ್ಯೆಗೆ ಸಿಲುಕಿಸಿದೆ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ಯಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು, ಉದ್ಯೋಗಿಗಳು, ಉದ್ಯೋಗದಾತ ಕಂಪನಿಗಳು, ವಾಹನ ಚಾಲಕ ಮಾಲೀಕರು, ಜನಸಾಮಾನ್ಯರು, ತೆರಿಗೆಯ ಹೊರೆಯಿಂದ ನಲುಗಿ ಹೋಗಿದ್ದಾರೆ. ಕೇಂದ್ರ ಮತ್ತು ರಾಜ್ಯದ ಲ್ಲಿರುವುದು ಜನವಿರೋಧಿ ಸರ್ಕಾರ ಎಂದರು. 60 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಬಿಜೆಪಿ ಪ್ರಮುಖರು ಕೇಳುತ್ತಾರೆ. ಕಾಂಗ್ರೆಸ್ ಸ್ಥಾಪಿಸಿದ ರೈಲ್ವೆ, ಜೀವವಿಮೆ , ವಿಮಾನ ನಿಲ್ದಾಣ, ವಿದ್ಯುತ್ ಇಲಾಖೆ, ಬಿಎಸ್ಎನ್ಎಲ್ ಎಲ್ಲವನ್ನೂ ಬಿಜೆಪಿ ಯನ್ನು ಪೋಷಿಸುವ ಖಾಸಗಿಯವರಿಗೆ ಮಾರಾಟ ಮಾಡಿದ್ದಾರೆ. ಇನ್ನು ದೇಶವನ್ನು ಮಾರಲು ಮಾತ್ರ ಬಾಕಿ ಇದೆ. ಭ್ರಷ್ಟಾಚಾರದಲ್ಲಿ ನಿಸ್ಸೀಮರಾ ಗಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು. ಕಡ್ತಲ ಸೇರಿಸಿ: ದಿ.ಗೋಪಾಲ ಭಂಡಾರಿ, ನಮ್ಮೆಲ್ಲರ ಹೋರಾಟದ ಫಲವಾಗಿ ಹೆಬ್ರಿ ತಾಲ್ಲೂಕು ಆಗಿದೆ. ಬಿಜೆಪಿ ಸಮಾನಮನಸ್ಕ ಸಮಿತಿ ತಾಲ್ಲೂಕು ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಅಂದು ಕಾರ್ಕಳ ತಾಲ್ಲೂಕಿನಲ್ಲಿರುವ ಕಡ್ತಲವನ್ನು ಸೇರಿಸಲು ಇದೇ ಬಿಜೆಪಿ ಮುಖಂಡರು ಆಕ್ಷೇಪ ಮಾಡಿದ್ದರು. ಈಗ ಸೇರಿಸಬೇಕು ಎನ್ನುತ್ತಾರೆ. ಕಡ್ತಲ ಗ್ರಾಮ ಪಂಚಾಯತಿ ಸೇರಿದಂತೆ 15 ಕಿ.ಮೀ. ಸುತ್ತಲಿನ ಗ್ರಾಮಗಳನ್ನು ಸೇರಿಸುವುದಕ್ಕೆ ಕಾಂಗ್ರೆಸ್ ಸಹಮತವಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಪ್ರಶ್ನಿಸಿದರು. ಸಾಧ್ಯವಾದರೆ ಮೊದಲು ಹೆಬ್ರಿಯಲ್ಲಿ ಮೊದಲು ಅಟಲ್ ಜನಸ್ನೇಹಿ ಕೇಂದ್ರ, ನಾಡಕಚೇರಿ ತೆರದು ಜನತೆಗೆ ಕಂದಾಯ ಸೇವೆ ನೀಡಲಿ. ತಾಲ್ಲೂಕಿನ ಹೆಸರಿನಲ್ಲಿ ರಾಜಕೀಯ ಮಾಡಬೇಡಿ ಎಂದು ಮಂಜುನಾಥ ಪೂಜಾರಿ ಹೇಳಿದರು. ಮುದ್ರಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಶಿಕಲಾ ಡಿ.ಪೂಜಾರಿ, ಯುವ ಮುಖಂಡ ಹುತ್ತುರ್ಕೆ ದಿನೇಶ ಶೆಟ್ಟಿ, ಶಿವಪುರ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ನಾಯಕ್, ಮುಖಂಡರಾದ ಶೀನ ಪೂಜಾರಿ, ಶಿವರಾಮ ಪೂಜಾರಿ, ಹೆಬ್ರಿ ಪಂಚಾಯಿತಿ ಸದಸ್ಯ ಕನ್ಯಾನ ಸಂತೋಷ ನಾಯಕ್ ಇದ್ದರು. ನಾಳೆ ಪ್ರತಿಭಟನೆ: ಇಂಧನ ತೈಲ ಬೆಲೆ, ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮತ್ತು ಬಿಜೆಪಿಯ ಜನವಿರೋಧಿ ನೀತಿ ವಿರುದ್ಧ ಇದೇ 9ರಂದು ಹೆಬ್ರಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಲಿದ್ದು ಕಾಂಗ್ರೆಸ್ ಕಾರ್ಯಕರ್ತರು, ಗ್ರಾಮಸ್ಥರು ಭಾಗವಹಿಸುವಂತೆ ಮಂಜುನಾಥ ಪೂಜಾರಿ ಮನವಿ ಮಾಡಿದರು. |