ಸರಕಾರಿ ಉದ್ಯೋಗ ಕೊಡಿಸುವುದಾಗಿ ಫೇಸ್ ಬುಕ್ನಲ್ಲಿ ವಂಚನೆ, ಓರ್ವನ ಬಂಧನ-7 ಲ್ಯಾಪ್ ಟಾಪ್ ವಶಕ್ಕೆ
ಉಡುಪಿ: ಸರಕಾರಿ ಉದ್ಯೋಗ ದೊರಕಿಸಿಕೊಡುವುದಾಗಿ ಸಾಮಾಜಿಕ ಜಾಲತಾಣದ ಮೂಲಕ ವಂಚಿಸುತ್ತಿದ್ದ ವ್ಯಕ್ತಿಯೊರ್ವನನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿ ಆತನಿಂದ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಮುಖಾಂತರ ಸರ್ಕಾರಿ ಉದ್ಯೋಗ ನೀಡುವುದಾಗಿ ನಂಬಿಸುತ್ತಿದ್ದ ಕಾಪು ಉಳಿಯಾರಗೋಳಿ ನಿವಾಸಿ ನಿಶಾಂತ ಎಸ್. ಕುಮಾರ್ ಯಾನೆ ನಿತಿನ್ (21) ಬಂಧಿತ ಆರೋಪಿ.
ಈತ ಸರಕಾರಿ ಉದ್ಯೋಗ ದೊರಕಿಸಿಕೊಡುವುದಾಗಿ ಹಲವಾರು ಮಂದಿಗೆ ವಂಚಿಸಿದ್ದ, ಫೇಸ್ ಬುಕ್ನಲ್ಲಿ ಪರಿಚಯಿಸಿಕೊಂಡು ಸರಕಾರಿ ಉದ್ಯೋಗ ದೊರಕಿಸಿಕೊಡುವುದಾಗಿ ನಂಬಿಸಿ ಹಲವಾರು ಜನರಿಂದ ಸಾವಿರಾರು ರೂಪಾಯಿ ಸಂಗ್ರಹಿಸುತ್ತಿದ್ದ. ಮಾತ್ರವಲ್ಲದೆ, ಉದ್ಯೋಗ ಸಿಗಬೇಕಾದರೆ ಒನ್ಲೈನ್ ಪರೀಕ್ಷೆ ಬರೆಯಬೇಕು ಅದಕ್ಕಾಗಿ ಲ್ಯಾಪ್ಟಾಪ್ ಬೇಕು ಎಂದು ನಿರುದ್ಯೋಗಿಗಳಲ್ಲಿ ಪಡೆದುಕೊಳ್ಳುತ್ತಿದ್ದ. ನಿಶಾಂತ್ ವರ್ತನೆಯಲ್ಲಿ ಸಂಶಯಗೊಂಡ ನಿರುದ್ಯೋಗಿಯೊಬ್ಬರು ಉಡುಪಿ ಸೆನ್ ಠಾಣೆಗೆ ದೂರು ನೀಡಿದ್ದರು.
ತನಿಖೆ ಕೈಗೆತ್ತಿಕೊಂಡ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣಾ ನಿರೀಕ್ಷಕ ರಾಮಚಂದ್ರ ನಾಯಕ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ 7 ಲ್ಯಾಪ್ ಟಾಪ್ ಹಾಗೂ 1 ಮೊಬೈಲ್ ಹಾಂಡ್ ಸೆಟ್ (ಅಂದಾಜು ಮೌಲ್ಯ ರೂ, 1,50,000/-) ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ್ ಇವರ ನಿರ್ದೇಶ, ಉಡುಪಿ ಜಿಲಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ್ರ ಮಾರ್ಗದರ್ಶನದಲ್ಲಿ ಸೆನ್ ಠಾಣೆಯ ಎಎಸೈ ಕೇಶವ ಗೌಡ, ಸಿಬಂದಿಗಳಾದ ಪ್ರಸನ್ನ ಸಿ. ಸಾಲಿಯಾನ್, ಜೀವನ್, ರಾಘವೇಂದ್ರ, ನವೀನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.