ಆಗುಂಬೆ ಘಾಟಿ: ಪ್ರಾಣಿಗಳಿಗೆ ಆಹಾರ, ಪ್ಲಾಸ್ಟಿಕ್ ಎಸೆಯುತ್ತೀರಾ..? ದಂಡ ತೆರಲು ಸಿದ್ಧರಾಗಿ!
ಉಡುಪಿ, ಫೆ.6: ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ಆಗುಂಬೆ ಘಾಟಿಯಲ್ಲಿ ಕಾಡು ಪ್ರಾಣಿಗಳಿಗೆ ಆಹಾರ ತಿನಿಸುವವರು ಮತ್ತು ರಸ್ತೆ ಬದಿ ಆಹಾರ ಪೊಟ್ಟಣಗಳನ್ನು ಎಸೆಯುವವರ ವಿರುದ್ಧ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವನ್ಯಜೀವಿ ವಿಭಾಗವು ವಾರಾಂತ್ಯದಲ್ಲಿ ಕಾರ್ಯಾಚರಣೆಗೆ ಇಳಿದಿದೆ.ಈ ಹಿನ್ನೆಲೆಯಲ್ಲಿ ಇಂದು ಸೋಮೇಶ್ವರದಿಂದ ಆಗುಂಬೆವರೆಗಿನ 10ಕಿ.ಮೀ. ರಸ್ತೆಯುದ್ದಕ್ಕೂ ಹೆಬ್ರಿ, ಕಾರ್ಕಳ, ಅಮಾಸೆಬೈಲು ಮತ್ತು ಸಿದ್ಧಾಪುರ ವನ್ಯ ಜೀವಿ ವಿಭಾಗದ ಸುಮಾರು 40 ಮಂದಿ ಸಿಬ್ಬಂದಿಗಳು ನಿಂತು, ಪ್ರಾಣಿಗಳಿಗೆ ಆಹಾರ ತಿನಿಸುವ ಮತ್ತು ರಸ್ತೆ ಬದಿ ಆಹಾರ ಪೊಟ್ಟಣ, ಪ್ಲಾಸ್ಟಿಕ್ ಎಸೆಯುವ ವಾಹನ ಚಾಲಕರಿಂದ ದಂಡ ವಸೂಲಿ ಮಾಡಲಾಯಿತು.
ಹೀಗೆ ರಸ್ತೆ ಬದಿ ಆಹಾರ ಎಸೆದ ಮೂವರಿಂದ ಅರಣ್ಯ ಇಲಾಖೆ ಸಿಬ್ಬಂದಿ ಗಳು ದಂಡ ವಸೂಲಿ ಮಾಡಿದರು. ಅದೇ ರೀತಿ ಘಾಟಿ ಆರಂಭದ ಸೋಮೇಶ್ವರದಲ್ಲಿ ಮತ್ತು ಆಗುಂಬೆ ಕೊನೆಯಲ್ಲಿ ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯ ನಡೆಸಿದರು. ಇಲ್ಲಿ ಜಾಗೃತಿ ಫಲಕಗಳನ್ನು ನೆಟ್ಟು ಜನಜಾಗೃತಿ ಮೂಡಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಸಿದ್ಧಾಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಗವಸ್‌ದಾಸ್ ಕುಡ್ತಲ್‌ಕರ್, ಹೆಬ್ರಿ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್, ಅಮಾಸೆಬೈಲು ವಲಯ ಅರಣ್ಯಾಧಿಕಾರಿ ಸಂದೇಶ್ ಕುಮಾರ್ ಹಾಗೂ ನಾಲ್ಕು ವಲಯಗಳ ಸಿಬಂದಿಗಳು ಪಾಲ್ಗೊಂಡಿದ್ದರು.
ನಿಗದಿ ಪಡಿಸಿದ ದಂಡರಸ್ತೆಬದಿ ತ್ಯಾಜ್ಯ, ಪ್ಲಾಸ್ಟಿಕ್ ಕಸ ಇತ್ಯಾದಿ ಎಸೆಯುವುದಕ್ಕೆ 100ರೂ., ರಸ್ತೆ ಬದಿ ಪೂರ್ವಾನುಮತಿ ಇಲ್ಲದೆ ಅರಣ್ಯಕ್ಕೆ ಪ್ರವೇಶ ಮಾಡುವುದು, ರಸ್ತೆಯ ಬದಿಯ ಜಲಪಾತಗಳಲ್ಲಿ ಸ್ನಾನ ಮಾಡುವುದು, ರಸ್ತೆ ವಾಹನ ತೊಳೆಯುವುದು, ಅಡುಗೆ ತಯಾರಿಸುವುದು, ರಾಷ್ಟ್ರೀಯ ಉದ್ಯಾನವನದ ಒಳಗೆ ಸಕಾರಣವಿಲ್ಲದೆ ನಿಗದಿಪಡಿಸಿದ ಅವಧಿಗಿಂತ ಹೆಚ್ಚು ಸಮಯ ಉಳಿಯುವುದಕ್ಕೆ ತಲಾ 200ರೂ. ಮತ್ತು ವನ್ಯಪ್ರಾಣಿಗಳಿಗೆ ತಿಂಡಿ ತಿನಿಸು ನೀಡುವುದಕ್ಕೆ 50ರೂ. ದಂಡವನ್ನು ನಿಗದಿಪಡಿಸಲಾಗಿದೆ.
‘ಈ ಕಾರ್ಯಾಚರಣೆಯನ್ನು ಆಗುಂಬೆ ಘಾಟಿಯ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಾದು ಹೋಗುವ ಶನಿವಾರ ಮತ್ತು ರವಿವಾರ ನಡೆಸಲಾಗುತ್ತಿದೆ. ಮನುಷ್ಯ ಸೇವಿಸುವ ಆಹಾರ, ಜಂಕ್ ಫುಡ್‌ಗಳನ್ನು ಪ್ರಾಣಿ ಗಳಿಗೆ ನೀಡುವುದರಿಂದ ಅದರ ಆಹಾರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಲದೆ ಅದರ ಆಹಾರ ಕ್ರಮಗಳನ್ನು ಬದಲಾಗಿ, ಇದೇ ಆಹಾರಕ್ಕೆ ಹೊಂದಿ ಕೊಳ್ಳುವ ಸಾಧ್ಯತೆ ಇರುತ್ತದೆ. ಆಹಾರ ಸಿಗದೆ ಇದ್ದಾಗ ಮಕ್ಕಳು, ಮನುಷ್ಯರ ಮೇಲೆ ದಾಳಿ ನಡೆಸುವ ಅಪಾಯ ಇರುತ್ತದೆ. ಅಲ್ಲದೆ ರೋಗ ಹರಡುವಿಕೆಗೂ ಕಾರಣವಾಗುತ್ತದೆ’ –ಅನಿಲ್ ಕುಮಾರ್, ವಲಯ ಅರಣ್ಯಾಧಿಕಾರಿ, ಹೆಬ್ರಿ ವನ್ಯಜೀವಿ