ರಾಷ್ಟ್ರೀಯ ಹಿತಾಸಕ್ತಿಯಿಂದ ಅನ್ನದಾತರಿಂದ ಶಾಂತಿಯುತ ಸತ್ಯಾಗ್ರಹ: ರಾಹುಲ್ ಗಾಂಧಿ
ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಶನಿವಾರ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು, ಅನ್ನದಾತರ ಶಾಂತಿಯುತ ಪ್ರತಿಭಟನೆ ದೇಶದ ಹಿತಾಸಕ್ತಿಗೆ ಸಂಬಂಧಿಸಿದ್ದಾಗಿದೆ. ಮೂರು ಕೃಷಿ ಕಾಯ್ದೆಗಳು ರೈತರು ಹಾಗೂ ಕಾರ್ಮಿಕರಿಗಷ್ಟೇ ಅಲ್ಲ, ಸಾಮಾನ್ಯ ಜನರು ಹಾಗೂ ದೇಶಕ್ಕೂ ಅಪಾಯಕಾರಿಯಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಕೂಡ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರೈತರನ್ನು ತಡೆಯಲು ಗಡಿಯಲ್ಲಿ ಭಾರೀ ಪ್ರಮಾಣದ ಬ್ಯಾರಿಕೇಡ್ ಗಳನ್ನು ಹಾಕಿರುವುದನ್ನು ಖಂಡಿಸಿರುವ ಪ್ರಿಯಾಂಕಾ ಅವರು, ಗೋಡೆಯ ಮೂಲಕ ನೀವೇಕೆ ಭಯಪಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕೃಷಿ ಕಾಯ್ದೆ ವಿರೋಧಿಸಿ ಗಣರಾಜ್ಯೋತ್ಸವದಂದು ರೈತರು ದೆಹಲಿಯಲ್ಲಿ ನಡೆಸಿದ್ದ ಟ್ರ್ಯಾಕ್ಟರ್ ಜಾಥಾದ ದಿಕ್ಕು ಬದಲಾಗಿದ್ದು, ದಿನಗಳದಂತೆ ರೈತರ ಹೋರಾಟ ತೀವ್ರ ಪಡೆದುಕೊಳ್ಳುತ್ತಿದೆ. ದೇಶದಾದ್ಯಂತ ಇಂದು ರೈತರು ಹೆದ್ದಾರಿ ತಡೆದು (ಚಕ್ಕಾ ಜಾಮ್) ಪ್ರತಿಭಟನೆ ನಡೆಸುತ್ತಿದ್ದಾರೆ.