ದೇಶದ ಜನರ ಹಕ್ಕುಗಳನ್ನು ಕಾಪಾಡುವ ಕೆಲಸವನ್ನು ನ್ಯಾಯಾಂಗ ಮಾಡುತ್ತಿದೆ: ಪ್ರಧಾನಿ ಮೋದಿ

ನವದೆಹಲಿ: ಸಂವಿಧಾನವನ್ನು ಮತ್ತಷ್ಟು ಬಲಪಡಿಸುವ ರೀತಿಯಲ್ಲಿ ನಮ್ಮ ನ್ಯಾಯಾಂಗ ವ್ಯವಸ್ಥೆ ಸಂವಿಧಾನವನ್ನು ಸಕಾರಾತ್ಮಕವಾಗಿ ವ್ಯಾಖ್ಯಾನಿಸುತ್ತಾ ಬಂದಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ಇಂದು ಗುಜರಾತ್ ಹೈಕೋರ್ಟ್ ನ ವಜ್ರ ಮಹೋತ್ಸವ ಕಾರ್ಯಕ್ರಮವನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದರು. ದೇಶದ ಜನರ ಹಕ್ಕುಗಳನ್ನು ರಕ್ಷಿಸುವುದರಿಂದ ಹಿಡಿದು ದೇಶದ ಹಿತಾಸಕ್ತಿಯನ್ನು ಎತ್ತಿಹಿಡಿಯುವ ಸಂದರ್ಭಗಳಲ್ಲಿ ಕೂಡ ನ್ಯಾಯಾಂಗ ತನ್ನ ಕೆಲಸವನ್ನು ನಿರ್ವಹಿಸಿದೆ ಎಂದರು.

ನಂತರ ವಜ್ರ ಮಹೋತ್ಸವ ಅಂಗವಾಗಿ ಸ್ಮರಣಾ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ ಪ್ರಧಾನಿ, ಸತ್ಯ ಮತ್ತು ನ್ಯಾಯದ ಕಡೆಗೆ ಕೆಲಸ ಮಾಡುತ್ತಾ ಬಂದಿರುವ ಗುಜರಾತ್ ಹೈಕೋರ್ಟ್ ನ ಕಾರ್ಯವನ್ನು ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಹಿಂದಿನ ವರ್ಷಗಳಲ್ಲಿ, ಗುಜರಾತ್ ಹೈಕೋರ್ಟ್ ಮತ್ತು ಬಾರ್ ಕೌನ್ಸಿಲ್ ತಮ್ಮ ಕಾನೂನು ತಿಳುವಳಿಕೆ, ಪಾಂಡಿತ್ಯ ಮತ್ತು ಬೌದ್ಧಿಕತೆಯೊಂದಿಗೆ ವಿಶಿಷ್ಟ ಗುರುತನ್ನು ಹೊಂದಲು ಪ್ರಯತ್ನಿಸುತ್ತಿತ್ತು ಎಂದರು.

ನ್ಯಾಯಕ್ಕಾಗಿ ಗುಜರಾತ್ ಹೈಕೋರ್ಟ್ ತೋರಿಸಿದ ಕರ್ತವ್ಯಪರತೆ, ನಿಷ್ಠೆ, ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದುದರಿಂದ ಭಾರತೀಯ ನ್ಯಾಯಾಂಗ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವಕ್ಕೆ ಶಕ್ತಿ ಸಿಕ್ಕಿದೆ ಎಂದು ಪ್ರಧಾನಿ ಹೇಳಿದರು.

ಭಾರತದಲ್ಲಿನ ಕಾನೂನುಗಳು ಸಾವಿರಾರು ವರ್ಷಗಳ ನಾಗರಿಕತೆಯ ಮೂಲವಾಗಿದೆ. ನ್ಯಾಯ ಒದಗಿಸುವುದರಲ್ಲಿ ಉತ್ತಮ ಆಡಳಿತ ನಿಂತಿದೆ ಎಂದು ನಮ್ಮ ಪ್ರಾಚೀನ ಗ್ರಂಥಗಳು, ಪಠ್ಯಗಳು ಹೇಳುತ್ತವೆ. ಬಾರ್ ಕೌನ್ಸಿಲ್ ಗಳು ಮತ್ತು ನ್ಯಾಯಾಂಗ ವ್ಯವಸ್ಥೆ ಒಟ್ಟಾಗಿ ಕೆಲಸ ಮಾಡಿ ವಿಶ್ವದಲ್ಲಿಯೇ ಅತ್ಯುತ್ತಮವಾದ ನ್ಯಾಯಾಂಗ ವ್ಯವಸ್ಥೆಯನ್ನು ನಿರ್ಮಾಣ ಮಾಡುವಲ್ಲಿ ಶ್ರಮವಹಿಸಬೇಕು ಎಂದರು.

Leave a Reply

Your email address will not be published. Required fields are marked *

error: Content is protected !!