ಯುಪಿ ಸರ್ಕಾರದ ಆದೇಶ ಧಿಕ್ಕರಿಸಿ ಮಹಾಪಂಚಾಯತ್ಗಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ ರೈತರು
ಲಖನೌ: ಉತ್ತರ ಪ್ರದೇಶ ಸರ್ಕಾರ ಮಹಾಪಂಚಾಯತ್ ನಡೆಸಲು ಅನುಮತಿ ನಿರಾಕರಿಸಿದರೂ, ಸರ್ಕಾರದ ಆದೇಶ ಧಿಕ್ಕರಿಸಿ ಸಾವಿರಾರು ರೈತರು ಹೊಸದಾಗಿ ಜಾರಿಗೆತಂದ ಮೂರು ಕೃಷಿ ಕಾನೂನುಗಳ ವಿರುದ್ಧ ಶಾಮ್ಲಿ ಜಿಲ್ಲೆಯಲ್ಲಿ ಉಗ್ರ ಪ್ರತಿಭಟನೆ ನಡೆಸಿದರು.
ಭೈನ್ಸ್ವಾಲ್ ಗ್ರಾಮದ ಸ್ವಾಮಿ ಕಲ್ಯಾಣ್ ದೇವ್ ಕನ್ಯಾ ಗುರುಕುಲದಲ್ಲಿ ಇಂದು ನಡೆದ ಮಹಾಪಂಚಾಯತ್ ನಲ್ಲಿ ಸಾವಿರಾರು ರೈತರು ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ಮೈಕ್ ನಲ್ಲಿ ಜೋರಾಗಿ ಹಾಡುಗಳನ್ನು ಹಾಡಿದ ರೈತರ, ನಮ್ಮ ಕೂಗು ಪ್ರಧಾನಿ ನರೇಂದ್ರ ಮೋದಿಗೆ ಕೇಳಿಸಬೇಕು ಎಂದರು.
ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಲೋಕ ದಳ (ಆರ್ಎಲ್ಡಿ) ಮತ್ತು ಸಮಾಜವಾದಿ ಪಕ್ಷ (ಎಸ್ಪಿ) ಆಯೋಜಿಸಿತ್ತು.
ಶಾಮ್ಲಿ ಜಿಲ್ಲಾಡಳಿತ ಕೋವಿಡ್-19 ಹಿನ್ನೆಲೆಯಲ್ಲಿ ಏಪ್ರಿಲ್ ವರೆಗೆ ಯಾವುದೇ ದೊಡ್ಡ ಸಭೆ ಸಮಾರಂಭ ನಡೆಸುವಂತಿಲ್ಲ ಎಂದು ನಿರ್ಬಂಧ ವಿಧಿಸಿದ್ದು, ರೈತರ ಮಹಾಪಂಚಾಯತ್ ಗೆ ಅನುಮತಿ ನಿರಾಕರಿಸಿತ್ತು. ಅಲ್ಲದೆ ನಿರ್ಬಂಧ ಉಲ್ಲಂಘಿಸಿದರೆ ರೈತರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು. ಆದಾಗ್ಯೂ, ಸಂಘಟಕರು ಸರ್ಕಾರದ ಆದೇಶ ಧಿಕ್ಕರಿಸಿ ಮಹಾಪಂಚಾಯಿತಿ ನಡೆಸಿದ್ದಾರೆ.