ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನ: ವಿಜೃಂಭನೆಯ ರಾಶಿ ಪೂಜಾ ಮಹೋತ್ಸವ ಸಂಪನ್ನ
ಮಲ್ಪೆ: ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ವಿಜೃಂಭನೆಯಿಂದ ನಡೆದ ರಾಶಿ ಪೂಜಾ ಮಹೋತ್ಸವವು ಇಂದು ಸಂಪನ್ನಗೊಂಡಿತು.
ದೇಗುಲದ ತಂತ್ರಿ ವೇದ ಮೂರ್ತಿ ಪುತ್ತೂರು ಹಯವದನ ತಂತ್ರಿಗಳು ಮತ್ತು ತಂಡದವರ ನೇತೃತ್ವದಲ್ಲಿ ಪೂಜಾ ಮಹೋತ್ಸವವು ನೆರವೇರಿತು. ಫೆ. 4 ರ ಮುಂಜಾನೆ ಆರಂಭಗೊಂಡ ಪೂಜಾ ಮಹೋತ್ಸವವು ಫೆ. 5 ರ ಬೆಳಗಿನ ಜಾವದ ವರೆಗೆ 24 ಗಂಟೆಗಳ ಕಾಲ ನಡೆಯಿತು.
ಪೂಜಾ ಮಹೋತ್ಸವದಲ್ಲಿ ಶ್ರೀ ನಾರಾಯಣ ದೇವರನ್ನು 12 ಹರಿವಾಣಗಳಲ್ಲಿ 12 ರಾಶಿಗಳ ಉಬ್ಬು ಚಿತ್ರವನ್ನು ರಚಿಸಿ ಅಲಂಕರಿಸಲಾಗಿತ್ತು. ಅಲ್ಲದೇ ದೇವಸ್ಥಾನವು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದ್ದವು.
ರಾಶಿ ಪೂಜಾ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಾದ್ಯ ಸಂಗೀತ, ಭರತ ನಾಟ್ಯ , ಯಕ್ಷಗಾನ, ಭಜನೆ, ಕೀರ್ತನೆ ಅಷ್ಟಾವಧಾನ ಪೂಜೆಗಳು ನಡೆದವು. ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ಶ್ರೀ ಪಾದರು ರಾಶಿ ಪೂಜೆಯ ಪುಸ್ತಕವನ್ನು ಅನಾವರಣಗೊಳಿಸಿ, ಅಶಿರ್ವಚನ ನೀಡಿದರು.
ಈ ಪೂಜಾ ಮಹೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.ಈ ಸಂದರ್ಭ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಸದಸ್ಯರಾದ ಜನಾರ್ದನ ಕೊಡವೂರು, ಅಡಿಗ ಕೃಷ್ಣ ಮೂರ್ತಿ ಭಟ್, ಭಾಸ್ಕರ ಪಾಲನ್ ಬಾಚನ ಬೈಲು, ರಾಜ ಎ ಸೇರಿಗಾರ್, ಚಂದ್ರಕಾಂತ್ ಕಾನಂಗಿ, ಬಾಬ ಕೆ., ಸುಧಾ ಎನ್ ಶೆಟ್ಟಿ, ಬೇಬಿ ಎಸ್ ಮೆಂಡನ್, ರಾಶಿ ಪೂಜಾ ಸೇವಾ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್, ಗೌರವಾಧ್ಯಕ್ಷ ಆನಂದ ಪಿ ಸುವರ್ಣ, ಮೊದಲಾದವರು ಪಾಲ್ಗೊಂಡಿದ್ದರು.