ಐಎಲ್ಐ, ಸಾರಿ ವರದಿ ನಿರ್ವಹಿಸದ ಖಾಸಗಿ ಆಸ್ಪತ್ರೆಗಳ ಮಾನ್ಯತೆ ರದ್ದು: ಜಿಲ್ಲಾಧಿಕಾರಿ
ಉಡುಪಿ: ಜಿಲ್ಲೆಯ ಆಸ್ಪತ್ರೆಗಳಲ್ಲಿ ಸ್ವಾಬ್ ಪರೀಕ್ಷೆ ಕಡಿಮೆಯಾಗುತ್ತಿದ್ದು, ಐಎಲ್ಐ, ಸಾರಿ ವರದಿ ಸರಿಯಾಗಿ ನಿರ್ವಹಿಸದೇ ಇರುವ ಹಾಗೂ ಹೊರರೋಗಿ ವಿಭಾಗದ ನೋಂದಣಿಯನ್ನು ನಿರ್ವಹಿಸದ ಮತ್ತು ದರಪಟ್ಟಿಯನ್ನು ಪ್ರದರ್ಶಿಸದೇ ಇರುವ ಖಾಸಗಿ ಆಸ್ಪತ್ರೆಗಳ ಮಾನ್ಯತೆಯನ್ನು ರದ್ದು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.
ಅವರು ಗುರುವಾರ, ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿಯವರ ಕಚೇರಿಯಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಖಾಸಗಿ ವೈದ್ಯಕೀಯ ನೊಂದಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್ ಲಸಿಕೆಯನ್ನು ಎಲ್ಲಾ ಆರೋಗ್ಯ ಕಾರ್ಯಕರ್ತರು ಕಡ್ಡಾಯವಾಗಿ ತೆಗೆದುಕೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಜಿಲ್ಲೆಯು ಎಲ್ಲಾ ವಿಚಾರದಲ್ಲಿ ಮುಂಚೂಣಿಯಲ್ಲಿದ್ದು, ಲಸಿಕಾ ಕಾರ್ಯಕ್ರಮದಲ್ಲಿಯೂ ಕೂಡ ಈ
ಸ್ಥಾನವನ್ನು ಕಾಯ್ದುಕೊಳ್ಳುವಂತೆ ಅವರು ತಿಳಿಸಿದರು. ಖಾಸಗಿ ಕ್ಲಿನಿಕ್ಗಳಲ್ಲಿ ಕೋವಿಡ್ಗೆ ಸಂಬoಧಿಸಿದ ಐಎಲ್ಐ, ಸಾರಿ ವರದಿಗಳನ್ನು ಸರಿಯಾದ ರೀತಿಯಲ್ಲಿ ಸಮರ್ಪಕವಾಗಿ ನಿರ್ವಹಿಸಬೇಕು ಹಾಗೂ ಅವರನ್ನು ಸ್ವಾಬ್ ಪರೀಕ್ಷೆಗೆ ಒಳಪಡಿಸದೇ ಇದ್ದ÷ಲ್ಲಿ ಅಂತವರ ಕ್ಲಿನಿಕ್ ನೋಂದಣಿಯನ್ನು ರದ್ದುಗೊಳಿಸಲಾಗುವುದು ಎಂದರು.
ಸಭೆಯಲ್ಲಿ ಡಿಹೆಚ್ಓ ಡಾ. ಸುಧೀರ್ ಚಂದ್ರ ಸೂಡ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮರಾವ್ ಕೆ. ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.