ಮೋದಿ, ಅಮಿತ್ ಶಾ ಇರುವವರೆಗೂ ನನ್ನನ್ನು ಯಾರೂ ಏನೂ ಮಾಡಲಾರರು: ಸಿಎಂ
ಬೆಂಗಳೂರು: ಸವಾಲುಗಳನ್ನು ಎದುರಿಸಲು ತಮಗೆ ಎಲ್ಲಿಲ್ಲದ ಉತ್ಸಾಹ. ಸವಾಲುಗಳು ತಮ್ಮನ್ನು ಮತ್ತಷ್ಟು ಗಟ್ಟಿಗೊಳಿಸುತ್ತಾ ಹೋಗುತ್ತಿದೆ. ನನ್ನ ರಾಜಕೀಯ ಬದುಕಿನ 5 ದಶಕಗಳಲ್ಲಿ ಹತ್ತು-ಹಲವು ರೀತಿಯ ಸವಾಲುಗಳನ್ನು ಎದುರಿಸಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿಂದು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಸುದೀರ್ಘ ಉತ್ತರ ನೀಡಿದ ಅವರು, ಇಂತಹ ಸವಾಲು ಎದುರಿಸಿ ಜನರ ಆಶೀರ್ವಾದದಿಂದ ರಾಜ್ಯದಲ್ಲಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೇನೆ ಎಂದರು.
ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ಅವರಿಗೆ ಯಾವುದೇ ಸಹಕಾರ ನೀಡದೆ ಕ್ಲರ್ಕ್ ರೀತಿಯಲ್ಲಿ ನಡೆಸಿಕೊಂಡರು. ಅನೇಕ ರೀತಿಯಲ್ಲಿ ಕಿರುಕುಳ ನೀಡಿ ಕೆಲಸ ಮಾಡಲೂ ಸ್ವಾತಂತ್ರ್ಯ ನೀಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬ ಏಕೈಕ ಉದ್ದೇಶದಿಂದ ಜೆಡಿಎಸ್ ನೊಂದಿಗೆ ಕೈಜೋಡಿಸಿ ಅವರಿಗೂ ಕೆಲಸ ಮಾಡಲು ಅವಕಾಶ ನೀಡದೆ ಕಿರುಕುಳ ನೀಡಿದರು ಎಂದು ಮುಖ್ಯಮಂತ್ರಿ ಆರೋಪಿಸಿದರು.
ಮಧ್ಯಪ್ರವೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ನಾವು ಕೂಡ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೆವು. ಒಂದು ಕ್ಷೇತ್ರ ಬಿಟ್ಟು ಉಳಿದೆಲ್ಲಾ ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೆವು. ಬಳ್ಳಾರಿ, ಮಂಡ್ಯ, ಜಮಖಂಡಿಯಲ್ಲಿ ನೀವು ಸೋತಿಲ್ಲವೇ ಎಂದು ತಿರುಗೇಟು ನೀಡಿದರು.
ಮುಖ್ಯಮಂತ್ರಿ ಮಾತು ಮುಂದುವರಿಸಿ, ಸತ್ಯಕ್ಕೆ ದೂರವಾದ ಮಾತನ್ನು ನಾನು ಎಂದೂ ಹೇಳಿಲ್ಲ, ವಾಸ್ತವಕ್ಕೆ ಹತ್ತಿರವಾದ ವಿಷಯ ಹೇಳಿದ್ದೇನೆ, ನಿಮ್ಮ ಪರಿಸ್ಥಿತಿ ಸುಧಾರಿಸಿಕೊಳ್ಳಿ ಎಂದು ಸಲಹ ನೀಡಿದ್ದೇನೆ ಎಷ್ಟೇ ಎಂದು ಸಮಜಾಯಿಸಿ ನೀಡಿದರು.
ರಾಜ್ಯಪಾಲರ ಭಾಷಣದಲ್ಲಿ ಮುನ್ನೋಟ ಇಲ್ಲ, ಅದು ಸುಳ್ಳಿನ ಕಂತೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ, ಇದು ಚುನಾಯಿತ ಸರ್ಕಾರ ಅಲ್ಲ ಎಂದೂ ಆರೋಪಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಅನೈತಿಕ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸಿಲ್ಲವೇ ? ಚಾಮುಂಡೇಶ್ವರಿ ಕ್ಷೇತ್ರದ ಗೆದ್ದಿದ್ದ ನೀವು 2006ರಲ್ಲಿ ಕಾಂಗ್ರೆಸ್ ಸೇರಿ ಆಪರೇಷನ್ ಮಾಡಿಲ್ಲವೇ ? ಹಾಲಿಗೆ ಪ್ರೋತ್ಸಾಹ ಧನ ಪ್ರಾರಂಭ ಮಾಡಿದ್ದೇ ಯಡಿಯೂರಪ್ಪ. ನೀವು ಅದನ್ನು ಮುಂದುವರಿಸಿದ್ದೀರಿ ಅಷ್ಟೇ ಎಂದು ತಿರುಗೇಟು ನೀಡಿದರು.
ಕಲ್ಯಾಣ ಕರ್ನಾಟಕ ಕನಸು ನನಸು ಮಾಡುವುದು ಎಲ್ಲರ ಜವಾಬ್ದಾರಿ. ಅನುಭವ ಮಂಟಪಕ್ಕೆ 200 ಕೋಟಿ ರೂ.ಬಿಡುಗಡೆ ಮಾಡಿದ್ದು, 2 ವರ್ಷಗಳಲ್ಲಿ ಅದು ಪೂರ್ಣ ಆಗುತ್ತದೆ. ಅದಕ್ಕೆ 600 ಕೋಟಿ ರೂ. ಖರ್ಚು ಮಾಡಲಾಗುವುದು, ಅದರ ಟೆಂಡರ್ ಆರಂಭವಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.
ತಮ್ಮ ಮೇಲೆ ಅನೇಕ ಪ್ರಕರಣಗಳು ದಾಖಲಾಗಿವೆ, ಜಾಮೀನಿನ ಮೇಲೆ ಹೊರಗಿದ್ದೇನೆ ಎಂದು ಹೇಳಿದ್ದಾರೆ. ಹಾದಿ ಬೀದಿಯಲ್ಲಿ ಹೋಗುವವರು ಆರ್ ಟಿಐ ಮೂಲಕ ಮಾಹಿತಿ ಪಡೆದು ದೂರು ನೀಡುವುದು ಸಾಮಾನ್ಯ. ಇದರಿಂದ ಏನೂ ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಯಡಿಯೂರಪ್ಪ ಹೇಳಿದರು.
ಕಳೆದ ಆರು ತಿಂಗಳಿಂದ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ ತಮಗೆ ಮೋದಿಯವರ ಬೆಂಬಲ, ಗೃಹ ಸಚಿವರ ಬೆಂಬಲ, ಜನರ ಆಶೀರ್ವಾದ ಇರುವವರೆಗೆ ತಾವು ಅಧಿಕಾರದಲ್ಲಿ ಇರುತ್ತೇನೆ. ಇಂತಹ ನೂರು ಕೇಸು ಹಾಕಲಿ, ಎದುರಿಸುತ್ತೇನೆ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಮುಖ್ಯಮಂತ್ರಿಯವರ ಉತ್ತರ ತೃಪ್ತಿ ತಂದಿಲ್ಲ. ಯಡಿಯೂರಪ್ಪ ರಾಜೀನಾಮೆ ನೀಡುವುದಾಗಿ ತಾವು ಹೇಳಿಲ್ಲ, ಯುಗಾದಿ ಆದ ಮೇಲೆ ರಾಜೀನಾಮೆ ನೀಡುತ್ತಾರೆ ಎಂದು ಅವರ ಪಕ್ಷದ ಶಾಸಕರೇ ಹೇಳಿದ್ದರು. ಅದನ್ನು ನಾನು ಪ್ರಸ್ತಾಪಿಸಿದ್ದೆ ಎಂದು ಸ್ಪಷ್ಟನೆ ನೀಡಿದರು.
ಐದು ದಿನಗಳಲ್ಲಿ ಖಾತೆ ಬದಲಾವಣೆ ಮಾಡುವುದು ಸಮರ್ಥ ಮುಖ್ಯಮಂತ್ರಿ ಮಾಡುವ ಕೆಲಸವೇ ? ನಿಮ್ಮ ಎಂಎಲ್ ಎ, ಎಂಎಲ್ ಸಿ ಏನು ಮಾತನಾಡಿದ್ದಾರೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.