ಚಿತ್ರಮಂದಿರ: ಶೋ ಮಧ್ಯೆ 2 ಇಂಟರ್’ವಲ್ – ಸರ್ಕಾರದಿಂದ ಹೊಸ ಮಾರ್ಗಸೂಚಿ!

ಬೆಂಗಳೂರು: ರಾಜ್ಯದ ಎಲ್ಲಾ ಮಾದರಿಯ ಚಿತ್ರಮಂದಿರ ಗಳಲ್ಲಿ ಫೆ.5ರ ಶುಕ್ರವಾರದಿಂದ ಶೇ.100ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಪ್ರತಿ ಪ್ರದರ್ಶನದ ವೇಳೆ 2 ಮಧ್ಯಂತರ ಇಂಟರ್ ವಲ್ ನೀಡಬೇಕು ಎಂಬುದು ಸೇರಿದಂತೆ ಹಲವು ಅಂಶಗಳನ್ನೊಳಗೊಂಡ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಕನ್ನಡ ಚಿತ್ರರಂಗದ ಪ್ರಬಲ ಒತ್ತಡಕ್ಕೆ ಮಣಿದಿದ್ದ ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಚಿತ್ರೋದ್ಯಮದ ಪ್ರಮುಖರೊಂದಿಗೆ ನಡೆಸಿದ ಸಭೆ ಬಳಿಕ ತೀರ್ಮಾನ ಕೈಗೊಂಡು ಶೀಘ್ರ ಈ ಸಂಬಂಧ ಅಧಿಕೃತ ಆದೇಶ ಹೊರಡಿಸುವುದಾಗಿ ಹೇಳಿತ್ತು.

ಅದರಂತೆ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್ ಗಳಲ್ಲಿ ಶೇ.50ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಿ ಫೆ.3 ರಂದು ಹೊರಡಿಸಿದ್ದ ಆದೇಶ ಹಿಂಪಡೆದು, ಶುಕ್ರವಾರದಿಂದ ಶೇ.100ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ನೀಡಿ ಹೊಸ ಸುತ್ತೋಲೆ ಹೊರಡಿಸಿದ್ದಾರೆ.

ಈ ಸುತ್ತೋಲೆಯಲ್ಲಿ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸಿನ ಮೇರೆಗೆ ಐದು ವಿಶೇಷ ಷರತ್ತುಗಳನ್ನು ವಿಧಿಸಲಾಗಿದೆ.

ಷರತ್ತುಗಳು:

  • ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸುವ ಸಮಯವೂ ಸೇರಿದಂತೆ ಎಲ್ಲಾ ಸಮಯದಲ್ಲೂ ಪ್ರೇಕ್ಷಕರು ಮಾಸ್ಕ್ ಧರಿಸಿರುವುದನ್ನು ಖಚಿತಪಡಿಸಬೇಕು.
  • ಟಿಕೆಟ್ ಬುಕಿಂಗ್ ಅಥವಾ ಖರೀದಿ ವೇಳೆ ಪ್ರೇಕ್ಷಕರ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಬೇಕು. (ಇದರಿಂದ ಸಂಪರ್ಕಿತರ ಮಾಹಿತಿ ಪಡೆಯುವುದು ಹಾಗೂ ಕೋವಿಡ್ ಪರೀಕ್ಷೆ ನಡೆಸಲು ಅನುಕೂಲವಾಗಲಿದೆ).
  • ಹವಾನಿಯಂತ್ರಕಗಳು ಅಥವಾ ಯಾವುದೇ ಕೂಲಿಂಗ್ ವ್ಯವಸ್ಥೆಯ ಬಳಕೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು.
  • ಗ್ರಾಹಕ ಹಿತದೃಷ್ಟಿಯಿಂದ ಚಿತ್ರಮಂದಿರಗಳಲ್ಲಿ ವಾತಾವರಣ ಉತ್ತಮಗೊಳಿಸಲು ಪ್ರತೀ ಪ್ರದರ್ಶನದಲ್ಲಿ ಎರಡು ಮಧ್ಯಂತರ ವಿರಾಮ ನೀಡಬೇಕು.
  • ಆಯಕಟ್ಟಿನ ಸ್ಥಳಗಳಲ್ಲಿ ಕೋವಿಡ್-19 ನಿಯಂತ್ರಣ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತ ವಿವರಗಳನ್ನು ಪ್ರದರ್ಶಿಸಬೇಕು.

Leave a Reply

Your email address will not be published. Required fields are marked *

error: Content is protected !!