ಭಿಕ್ಷೆಯ 1ಲಕ್ಷ ರೂ. ಅನ್ನದಾನಕ್ಕೆ ನೀಡಿದ ಅಜ್ಜಿಗೆ ಪ್ರಶಂಸೆಗಳ ಸುರಿಮಳೆ

ಕೋಟ: ಯಾರೆ ಆದರೂ ಕೂಡಾ ದಾನ ಧರ್ಮ ಮಾಡಲು ಅವರು ಮಾಡುವ ಕಾಯಕ ಮುಖ್ಯವಲ್ಲ ಬದಲಾಗಿ ಮನಸ್ಸು ಮುಖ್ಯ ಎಂಬುದನ್ನ ಈ ಅಜ್ಜಿ ತೋರಿಸಿಕೊಟ್ಟಿದ್ದಾರೆ.

 ಇವರು, ಗಂಗೊಳ್ಳಿ ಮೂಲದ 65 ವರ್ಷದ ಅಶ್ವತ್ಥಮ್ಮ ಸಾರ್ವಜನಿಕರಿಂದ ಅಜ್ಜಿ ಎಂದೇ ಕರೆಯಲ್ಪಡುತ್ತಿದ್ದರು. ಉಡುಪಿ ಜಿಲ್ಲೆಯ ಸಾಲಿಗ್ರಾಮದ ಶ್ರೀ ಗುರುನರಸಿಂಹ ಹಾಗೂ ಆಂಜನೇಯ ದೇವಳದ ಸಮೀಪದ ಪರಿಸರದಲ್ಲಿ ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು. ಇದೀಗ ತಾವು ಭಿಕ್ಷೆ ಬೇಡಿ ಸಂಗ್ರಹಿಸಿದ ಮೊತ್ತದಲ್ಲಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಅನ್ನದಾನ ಸೇವೆಗೆ ನೀಡಿದ ದೇಣಿಗೆಯ ಮೊತ್ತ ಎಲ್ಲರಲ್ಲೂ ಅಚ್ಚರಿ ಮೂಡಿಸುವಂತೆ ಮಾಡಿದೆ.

ಪತಿ ಹಾಗೂ ಮಗಳನ್ನು  ಕಳೆದುಕೊಂಡಿರುವ ಇವರು, ಸಾಲಿಗ್ರಾಮದಲ್ಲಿ ಕಳೆದ 10 ವರ್ಷಗಳಿಂದ ವಾಸವಾಗಿದ್ದಾರೆ. ಗಂಗೊಳ್ಳಿಯಲ್ಲಿ ಇರುವ ಮೊಮ್ಮಕ್ಕಳನ್ನು ಆಗಾಗ ಭೇಟಿ ಮಾಡುತ್ತಿರುತ್ತಾರೆ. ಸಾಲಿಗ್ರಾಮ ದೇವಳದ ಕೆರೆ ಬಳಿಯ ದೋಣಿ ಇಡುವ ಕೊಠಡಿಯೇ ಇವರ ವಾಸಸ್ಥಳ.  ಸರ್ವರಿಗೂ ಒಳಿತಾಗಲಿ, ಲೋಕಕ್ಕೆ ಹಿತವಾಗಲಿ ಮತ್ತು ಹಸಿದವರಿಗೆ ಹೊಟ್ಟೆ ತುಂಬಲಿ ಇದರೊಂದಿಗೆ ಕರೊನಾದಿಂದ ನಾಡಿಗೆ ಮುಕ್ತಿ ದೊರೆಯಲಿ ಎಂಬ ಪ್ರಾರ್ಥನೆಯೊಂದಿಗೆ ತಾನು ಸಂಗ್ರಹಿಸಿದ ಸಂಪತ್ತಿನ ಒಂದು ಭಾಗ ಅಂದರೆ 1 ಲಕ್ಷ ರೂಪಾಯಿಯನ್ನು ಗುರುನರಸಿಂಹ ದೇವಸ್ಥಾನಕ್ಕೆ  ಫೆ.4 ರಂದು ಈ ಅಜ್ಜಿ ಸಮರ್ಪಿಸಿದರು.

ಇದರೊಂದಿಗೆ ಹಲವಾರು ಪವಿತ್ರ ಕ್ಷೇತ್ರಗಳ ಯಾತ್ರೆ ಮಾಡಿರುವ ಅಜ್ಜಿ, ವಿವಿಧ ದೇವಳಕ್ಕೆ ತಾನು ಸಂಪಾದಿಸಿದ ಹಣದ ಒಂದು ಪಾಲನ್ನು ನೀಡಿರುವುದು ವಿಶೇಷ. ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಜೀರ್ಣೋದ್ಧಾರ ವೇಳೆ 1.5 ಲಕ್ಷ ರೂ., ಪಂಪೆ ಹಾಗೂ ಪಂದಳ ಕ್ಷೇತ್ರಗಳಿಗೆ ತಲಾ 1ಲಕ್ಷ ರೂ. ನೀಡಿದ್ದಾರೆ. ಅದರಲ್ಲೂ ಅಯ್ಯಪ್ಪ ಸ್ವಾಮಿಯ ಬಗ್ಗೆ ಅಪಾರ ಭಕ್ತಿ ಹೊಂದಿರುವ ಅವರು, ಈ ಬಾರಿ ಶಬರಿಮಲೆಗೆ ಪ್ರಯಾಣ ಬೆಳೆಸುವ ಸಲುವಾಗಿ ಮಾಲೆ ಧರಿಸಿದ್ದಾರೆ. ಗುರುನರಸಿಂಹ ದೇವಳ ವಠಾರದಲ್ಲಿ ಫೆ. 9 ರಂದು ಇರುಮುಡಿ ಕಟ್ಟುವ ಸೇವೆಯೊಂದಿಗೆ ಸಾರ್ವಜನಿಕ ಅನ್ನದಾನ ಸೇವೆ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!