2019-20ರಲ್ಲಿ ಕಾಂಗ್ರೆಸ್ಗೆ ರೂ.139 ಕೋಟಿ ದೇಣಿಗೆ: ಮಾಹಿತಿ ಬಹಿರಂಗ
ನವದೆಹಲಿ: 2019-20ರಲ್ಲಿ ಕಾಂಗ್ರೆಸ್ ಪಕ್ಷವು ರೂ. 139 ಕೋಟಿ ದೇಣಿಗೆ ಪಡೆದಿದ್ದು, ಹಿರಿಯ ನಾಯಕ ಕಪಿಲ್ ಸಿಬಲ್ ಅವರು ಪಕ್ಷದ ನಿಧಿಗೆ ರೂ. 3 ಕೋಟಿ ದೇಣಿಗೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷವು 2019-20ರಲ್ಲಿ ಪಡೆದ ದೇಣಿಗೆಯ ವರದಿಯನ್ನು ಚುನಾವಣಾ ಆಯೋಗವು ಸಾರ್ವಜನಿಕವಾಗಿ ತೆರೆದಿಟ್ಟಿದೆ.
ಐಟಿಸಿ ಮತ್ತು ಸಂಬಂಧಿತ ಕಂಪನಿಗಳು ರೂ. 19 ಕೋಟಿ, ಪ್ರುಡೆಂಟ್ ಎಲೆಕ್ಟರೋಲ್ ಟ್ರಸ್ಟ್ ರೂ. 31 ದೇಣಿಗೆ ನೀಡಿವೆ ಎಂದು ವರದಿಯಲ್ಲಿ ಉಲ್ಲೇಖವಿದೆ.
ಚುನಾವಣಾ ಕಾನೂನುಗಳ ನಿಬಂಧನೆಗಳ ಪ್ರಕಾರ, ವ್ಯಕ್ತಿಗಳು, ಕಂಪನಿಗಳು, ಚುನಾವಣಾ ಟ್ರಸ್ಟ್ಗಳು ಮತ್ತು ಸಂಸ್ಥೆಗಳಿಂದ ಪಡೆದ ರೂ 20,000ಕ್ಕೂ ಅಧಿಕ ಮೊತ್ತದ ದೇಣಿಗೆ ಬಗ್ಗೆ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ವರದಿ ಮಾಡಬೇಕು.
ಇನ್ನೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರೂ 1,08,000, ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ರೂ 54,000 ಮತ್ತು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ 2019 ರ ಏಪ್ರಿಲ್ 1 ಮತ್ತು 2020 ರ ಮಾರ್ಚ್ 31 ರ ನಡುವೆ ಪಕ್ಷಕ್ಕೆ ರೂ 50,000 ದೇಣಿಗೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ಆಮೂಲಾಗ್ರ ಬದಲಾವಣೆ ಕೋರಿ 2020 ರ ಆಗಸ್ಟ್ನಲ್ಲಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದ 23 ನಾಯಕರ ಗುಂಪಿನಲ್ಲಿ ಒಬ್ಬರಾದ ಕಪಿಲ್ ಸಿಬಲ್, 2019-20ರಲ್ಲಿ ಪಕ್ಷದ ನಿಧಿಗೆ ರೂ 3 ಕೋಟಿ ನೀಡುವ ಮೂಲಕ ಪಕ್ಷದ ಸದಸ್ಯರಲ್ಲಿ ಅತಿದೊಡ್ಡ ವೈಯಕ್ತಿಕ ದಾನಿಗಳಾಗಿ ಹೊರಹೊಮ್ಮಿದ್ದಾರೆ.
ದಾನಿಗಳ ಪಟ್ಟಿಯಲ್ಲಿರುವ ‘ಜಿ 23’ ನ ಇತರ ಸದಸ್ಯರಲ್ಲಿ ಆನಂದ್ ಶರ್ಮಾ (₹ 54,000), ಶಶಿ ತರೂರ್ (ರೂ 54,000), ಗುಲಾಮ್ ನಬಿ ಆಜಾದ್ (ರೂ 54,000), ಮಿಲಿಂದ್ ದಿಯೋರಾ (ರೂ 1 ಲಕ್ಷ ) ಮತ್ತು ರಾಜ್ ಬಬ್ಬರ್ (ರೂ 1,08,000) ಸೇರಿದ್ದಾರೆ.
ಒಟ್ಟು 20,000 ರೂ.ಗಳಿಗಿಂತ ಅಧಿಕ ದೇಣಿಗೆ ಪಡೆದ ಒಟ್ಟು ಮೊತ್ತ ರೂ 139,01,62,000 ಆಗಿದೆ. ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಎ ಕೆ ಆಂಟನಿ, ಕುಮಾರಿ ಸೆಲ್ಜಾ ಮತ್ತು ಕಳೆದ ವರ್ಷ ನಿಧನರಾದ ಅಹ್ಮದ್ ಪಟೇಲ್ ಅವರು ಪಕ್ಷಕ್ಕೆ ಆರ್ಥಿಕ ದೇಣಿಗೆ ನೀಡಿದವರಲ್ಲಿ ಸೇರಿದ್ದಾರೆ.
ವಿಶೇಷವೆಂದರೆ, ಬಿಜೆಪಿಗೆ ಸೇರಲು 2020 ರ ಮಾರ್ಚ್ನಲ್ಲಿ ಕಾಂಗ್ರೆಸ್ ತೊರೆದ ಜ್ಯೋತಿರಾದಿತ್ಯ ಸಿಂಧಿಯಾ ಅವರು 2019-20ರ ಆರ್ಥಿಕ ವರ್ಷದಲ್ಲಿ ಪಕ್ಷಕ್ಕೆ 54,000 ರೂ. ದೇಣಿಗೆ ನೀಡಿದ್ದಾರೆ.
ದೇಣಿಗೆ ದಾಖಲೆಯನ್ನು ಕಳೆದ ವರ್ಷ ಡಿಸೆಂಬರ್ನಲ್ಲಿ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಸಲ್ಲಿಸಿತ್ತು. ಪಕ್ಷದ ಮಧ್ಯಂತರ ಖಜಾಂಚಿ ಪವನ್ ಬನ್ಸಾಲ್ ದಾಖಲೆಗೆ ಸಹಿ ಹಾಕಿದ್ದಾರೆ.
ಈ ಮಧ್ಯೆ, ಬಹುಜನ ಸಮಾಜ ಪಾರ್ಟಿಯು ತನ್ನ ಕೊಡುಗೆ ವರದಿಯಲ್ಲಿ 20,000 ರೂ. ಗಿಂತ ಹೆಚ್ಚಿನ ದೇಣಿಗೆ ಪಡೆದಿಲ್ಲ ಎಂದು ಹೇಳಿದೆ.