ಸರ್ಕಾರದ ಬಳಿ ಮಂತ್ರದಂಡವಿಲ್ಲ: ಟ್ರಾಕ್ಟರ್ ರ್ಯಾಲಿ ಹಿಂಸಾಚಾರದ ಕುರಿತ ಪಿಐಎಲ್ ವಜಾಗೊಳಿಸಿದ ದೆಹಲಿ ಹೈಕೋರ್ಟ್
ನವದೆಹಲಿ: ಎರಡೇ ದಿನದಲ್ಲಿ ತನಿಖೆ ಪೂರ್ಣಗೊಳಿಸಲು ಸರ್ಕಾರದ ಬಳಿ ಮಂತ್ರದಂಡವಿಲ್ಲ ಎಂದು ಕಿಡಿಕಾರಿದ ದೆಹಲಿ ಹೈಕೋರ್ಟ್ ಟ್ರಾಕ್ಟರ್ ರ್ಯಾಲಿ ಹಿಂಸಾಚಾರದ ಕುರಿತಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ.
ಜನವರಿ 26 ಗಣರಾಜ್ಯೋತ್ಸವದಂದು ರೈತರ ಟ್ರಾಕ್ಟರ್ ರ್ಯಾಲಿಯಲ್ಲಿ ನಡೆದ ಹಿಂಸಾಚಾರ ಮತ್ತು ಭದ್ರತೆಯ ಕೊರತೆಯಿಂದಾಗಿ ಕೆಂಪು ಕೋಟೆಯಲ್ಲಿ ಧಾರ್ಮಿಕ ಧ್ವಜವನ್ನು ಹಾರಿಸಲಾದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿರುವ ದೆಹಲಿ ಹೈಕೋರ್ಟ್ ಪಿಐಎಲ್ ಅನ್ನು ವಜಾಗೊಳಿಸಿದೆ.
ಅರ್ಜಿದಾರರ ಪರ ವಕೀಲ ವಿವೇಕ್ ನಾರಾಯಣ್ ಶರ್ಮಾ ಅವರು ಸಲ್ಲಿಕೆ ಮಾಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸ್ವೀಕೃತಿ ಕುರಿತು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ಪೀಠವು ಅರ್ಜಿದಾರರನ್ನು ನಿಮ್ಮ ಅರ್ಜಿಯನ್ನು ಹಿಂದಕ್ಕೆ ಪಡೆಯುತ್ತೀರೋ ಅಥವಾ ಅರ್ಜಿ ವಜಾ ವೆಚ್ಚಗಳೊಂದಿಗೆ ವಜಾಗೊಳಿಸಬೇಕೇ ಎಂದು ಕೇಳಿದೆ.
ಜನವರಿ 29 ರಂದೇ ಪಿಐಎಲ್ ದಾಖಲಾಗಿದೆ. ಅಂದರೆ ನೀವು ಜನವರಿ 26 ರಂದೇ ಅರ್ಜಿಯನ್ನು ಟೈಪ್ ಮಾಡಲು ಪ್ರಾರಂಭಿಸಿದ್ದೀರಾ ಎಂದು ನ್ಯಾಯಾಲಯವು ಅರ್ಜಿದಾರರ ಪರ ವಕೀಲ ವಿವೇಕ್ ನಾರಾಯಣ್ ಶರ್ಮಾ ಅವರನ್ನು ಕೇಳಿದೆ. ಅಲ್ಲದೆ ಕ್ರಿಮಿನಲ್ ಪ್ರೊಸೀಜರ್ ಕೋಡ್ ಅಡಿಯಲ್ಲಿ ತನಿಖೆಗೆ ಎಷ್ಟು ಸಮಯವನ್ನು ಬೇಕು ಎಂದು ನಿಮಗೆ ತಿಳಿದಿದೆಯೇ? ನೀವು ಒಬ್ಬ ವಕೀಲರಾಗಿದ್ದೀರಿ. ಇದರ ಬಗ್ಗೆ ನಿಮಗೆ ಜ್ಞಾನವಿರುತ್ತದೆ. ತನಿಖೆಗೆ ಎಷ್ಟು ಸಮಯವನ್ನು ಬೇಕಾಗುತ್ತದೆ? ಎಂದು ನ್ಯಾಯಪೀಠ ಪ್ರಶ್ನಿಸಿದೆ.
ಅಲ್ಲದೆ ಘಟನೆ ನಡೆದ ಎರಡೇ ದಿನಗಳಲ್ಲಿ ತನಿಖೆ ಪೂರ್ಣಗೊಳ್ಳುತ್ತದೆ ಎಂದು ನೀವು ಹೇಗೆ ನಿರೀಕ್ಷಿಸುತ್ತೀರಾ? ಸರ್ಕಾರವು ಮಂತ್ರದಂಡವನ್ನು ಹೊಂದಿದೆಯೇ.. ಚಿಟಿಕೆ ಹೊಡೆಯುವಷ್ಟರಲ್ಲಿ ತನಿಖೆ ಪೂರ್ಣಗೊಳಿಸಲು..? ಕೂಡಲೇ ಅರ್ಜಿಯನ್ನು ವಾಪಸ್ ಪಡೆಯಿರಿ.. ಇಲ್ಲವಾದ ಅರ್ಜಿ ವಜಾ ವೆಚ್ಚದೊಂದಿಗೆ ನಾವೇ ಅರ್ಜಿಯನ್ನು ವಜಾಗೊಳಿಸುತ್ತೇವೆ ಎಂದು ಪೀಠ ಹೇಳಿದೆ.
ಕೂಡಲೇ ನ್ಯಾಯಾಲಯದ ಮಾತಿಗೆ ಒಪ್ಪದಿ ವಕೀಲ ವಿವೇಕ್ ನಾರಾಯಣ್ ಶರ್ಮಾ ಅವರು, ಉತ್ತರ ಪ್ರದೇಶ ಮೂಲದ ತನ್ನ ಮೂವರು ಕಕ್ಷೀದಾರರ ಪರವಾಗಿ ಅರ್ಜಿ ಸಲ್ಲಿಸಿದ್ದೆ. ಇದೀಗ ಅರ್ಜಿಯನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ವಕೀಲರ ಮಾತಿಗೆ ಮನ್ನಣೆ ನೀಡಿದ ನ್ಯಾಯಾಲಯವು ವಕೀಲರಿಗೆ ಅರ್ಜಿ ವಾಪಸ್ ಪಡೆಯುವ ಅವಕಾಶ ನೀಡಿ ಅರ್ಜಿಯನ್ನು ವಜಾಗೊಳಿಸಿತು. ಇನ್ನು ಇದೇ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಾಲಿಸಿಟರ್ ಜನರಲ್ (ಎಸ್ಜಿ) ತುಷಾರ್ ಮೆಹ್ತಾ ತನಿಖೆಯ ಮಾಹಿತಿ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೂ 43 ಎಫ್ಐಆರ್ ದಾಖಲಿಸಲಾಗಿದೆ ಮತ್ತು ಆ ಪೈಕಿ 13 ಮಂದಿಯನ್ನು ದೆಹಲಿ ಪೊಲೀಸರ ವಿಶೇಷ ಸೆಲ್ (ಅಪರಾಧ ಶಾಖೆ) ಗೆ ವರ್ಗಾಯಿಸಲಾಗಿದೆ. ಕಾನೂನಿನ ಅನುಸಾರವಾಗಿ ಮತ್ತು ಆದ್ಯತೆಯ ಆಧಾರದ ಮೇಲೆ ತನಿಖೆಯನ್ನು ಕಟ್ಟುನಿಟ್ಟಾಗಿ ನಡೆಸಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.