ದಯವಿಟ್ಟು ರೈತರ ನೋವನ್ನು ಅರ್ಥ ಮಾಡಿಕೊಳ್ಳಿ, ಸರ್ವಾಧಿಕಾರಿಗಳಂತೆ ವರ್ತಿಸಬೇಡಿ:ವಿಪಕ್ಷಗಳ ತರಾಟೆ!

ನವದೆಹಲಿ: ರೈತರ ಪ್ರತಿಭಟನೆ ವಿಚಾರವನ್ನು ನಿಭಾಯಿಸುತ್ತಿರುವ ಮತ್ತು ನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮಗಳಿಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಕೇಂದ್ರ ಸರ್ಕಾರದ ಸಚಿವರುಗಳು ತಮ್ಮ ಪಾಡಿಗೆ ತಾವಿದ್ದಾರೆ, ರೈತರ ವಿರುದ್ಧ ಪ್ರತೀಕಾರದ ಕ್ರಮಗಳನ್ನು ಹೇರಲಾಗುತ್ತಿದ್ದು, ಶತ್ರುಗಳಂತೆ ಕಾಣಲಾಗುತ್ತಿದೆ. ಕಂದಕಗಳನ್ನು ನಿರ್ಮಿಸಿ ಬೇಲಿಗಳನ್ನು ಹಾಕುವುದು, ತಡೆಗೋಡೆ ನಿರ್ಮಿಸುವುದು ಎಷ್ಟು ಸರಿ ಎಂದು ವಿರೋಧ ಪಕ್ಷಗಳು ಪ್ರಶ್ನಿಸಿವೆ.

ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಇಂದು ಸದನದಲ್ಲಿ ಮಾತನಾಡಿದ ಆರ್ ಜೆಡಿ ಸಂಸದ ಮನೋಜ್ ಕುಮಾರ್ ಜ್ಹಾ, ರೈತರ ಸಮಸ್ಯೆ ಆಲಿಸುವ ತಾಳ್ಮೆಯನ್ನು ಸರ್ಕಾರ ಕಳೆದುಕೊಂಡಿದೆ, ಸರ್ವಾಧಿಕಾರಿಯಂತೆ ವರ್ತಿಸುತ್ತೀರಿ, ಸರ್ಕಾರ ವಿರುದ್ಧ ಟೀಕೆ ಮಾಡಿದರೆ ದೇಶ ವಿರೋಧ ಎಂದು ಬಿಂಬಿಸಲಾಗುತ್ತಿದೆ ಎಂದು ಟೀಕಿಸಿದರು.

ರೈತರ ಸಮಸ್ಯೆಗಳನ್ನು, ನೋವನ್ನು ಅರ್ಥ ಮಾಡಿಕೊಳ್ಳಿ ಎಂದು ಕೈಮುಗಿದು ಬೇಡಿಕೊಳ್ಳುತ್ತೇನೆ. ಈ ನಡುಗುವ ಚಳಿಯಲ್ಲಿ ನೀವು ಪ್ರತಿಭಟನಾ ರೈತರಿಗೆ ನೀರು ಪೂರೈಕೆ ಮಾಡುವುದನ್ನು, ಶೌಚಾಲಯ ವ್ಯವಸ್ಥೆಯನ್ನು ನಿಲ್ಲಿಸಿದ್ದೀರಿ, ಕಂದಕ ರಚಿಸಿ, ಮುಳ್ಳು ತಂತಿಗಳನ್ನು ನಿರ್ಮಿಸಿ ಬ್ಯಾರಿಕೇಡ್ ಗಳನ್ನು ಹಾಕಿದ್ದೀರಿ. ಭಾರತದೊಳಗೆ ನುಗ್ಗಿದ ನೆರೆ ದೇಶದವರಿಗೆ ಸಹ ಇಂತಹ ಕಠಿಣ ನಿಲುವು ತೋರಿಸಿದ್ದು ಈ ಹಿಂದೆ ಕೇಳಿಲ್ಲ ಕೂಡ ಎಂದರು.

ಇನ್ನು ಪಾಪ್ ಗಾಯಕಿ ರಿಹಾನ್ನ ಟ್ವೀಟ್ ಗೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಮನೋಜ್ ಕುಮಾರ್ ಜ್ಹಾ, ಟ್ವೀಟ್ ಮೂಲಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ಸರ್ಕಾರದ ನಡೆಯಿಂದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಬಹುದು ಎಂದರು.

ಅದಾನಿ ಗ್ರೂಪ್ ನಂತಹ ಖಾಸಗಿ ಉದ್ಯಮಿಗಳು ನಿರ್ಮಿಸಿರುವ ಕೋಲ್ಡ್ ಸ್ಟೋರೇಜ್ ಚೈನ್ ಮತ್ತು ಗೋದಾಮುಗಳನ್ನು ಉಲ್ಲೇಖಿಸಿದ ಅವರು, ನಿಮ್ಮ ಬೆನ್ನೆಲುಬು ರೈತರು. ನೀವು ಗೆದ್ದಿರುವ 303 ಸೀಟುಗಳು ಶೀತ ಸಂಗ್ರಹಾಗಾರ, ಗೋದಾಮುಗಳಿಂದ ಬಂದಿಲ್ಲ, ಬದಲಿಗೆ ಈ ದೇಶದ ರೈತರು, ಬಡವರಿಂದ ಸಿಕ್ಕಿದ್ದು. ನಾವು ನಿಮ್ಮನ್ನು ಬೆಂಬಲಿಸುತ್ತೇವೆ, ಆದರೆ ನಿಮ್ಮ ವಿರುದ್ಧ ಮಾತನಾಡಿದರೆ ಅದು ದೇಶ ವಿರೋಧಿ ಎಂದು ಬಿಂಬಿಸುವುದು ಸರಿಯಲ್ಲ. ದೇಶಭಕ್ತಿ ಇರುವುದು ಬಲ ಪ್ರದರ್ಶನದಲ್ಲಿ ಅಲ್ಲ, ಹೃದಯದಿಂದ ಬರಬೇಕು ಎಂದು ಕವನ ಓದುವ ಮೂಲಕ ವ್ಯಂಗ್ಯವಾಗಿ ಹೇಳಿದರು.

ದೇಶವು ಪೊಲೀಸರು, ತೋಳ್ಬಲ, ಜನ ಗಣ ಮನ ಮತ್ತು ವಂದೇ ಮಾತರಂಗಳಿಂದ ಕೂಡಿಲ್ಲ. ದೇಶವು ಸಂಬಂಧಗಳಿಂದ ಬೆಸೆಯಲ್ಪಟ್ಟಿದೆ ಮತ್ತು ನೀವು ಆ ಸಂಬಂಧಗಳನ್ನು ಮಣ್ಣಾಗಿಸಿದ್ದೀರಿ, ಬಿಹಾರ ರಾಜ್ಯ ಕಾರ್ಮಿಕರನ್ನು ಒದಗಿಸುವ ರಾಜ್ಯವಾಗಿ ಮಾರ್ಪಟ್ಟಿದೆ. ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳು ಕೂಡ ಬಿಹಾರ ಮಾದರಿಯಲ್ಲಿ ಆಗಬೇಕೆಂದು ನೀವು ಬಯಸುತ್ತಿದ್ದೀರ ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರು.

ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್  ನಾಯಕ ದಿಗ್ವಿಜಯ್ ಸಿಂಗ್, ನೋಟು ಅನಾಣ್ಯೀಕರಣದಿಂದ ಹಿಡಿದು ಸಿಎಎಯವರೆಗೆ ಸರ್ಕಾರದ ತಪ್ಪು ನಿರ್ಧಾರಗಳಾಗಿದ್ದು ದೇಶದ ಜನರನ್ನು ಇನ್ನಿಲ್ಲದಂತೆ ಸಂಕಷ್ಟಕ್ಕೆ ತಳ್ಳಿದೆ ಎಂದರು. 

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾತುಗಳನ್ನು ಉಲ್ಲೇಖಸಿದ ದಿಗ್ವಿಜಯ್ ಸಿಂಗ್, ನೋಟು ಅನಾಣ್ಯೀಕರಣವು ಒಂದು ಮಹತ್ವದ ಸಂಘಟಿತ ಲೂಟಿ ಮತ್ತು ಕಾನೂನುಬದ್ಧ ಪ್ರಮಾದವಾಗಿದೆ. ದೇಶದಲ್ಲಿ ಸುಮಾರು 50 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡರು. ಸಣ್ಣ, ಮಧ್ಯಮ ಉದ್ಯಮಗಳು ನಾಶವಾದವು, ಮೋದಿ ಸರ್ಕಾರದ ಭರವಸೆಗಳು ಮತ್ತು ಈಡೇರಿಕೆ ಮಧ್ಯೆ ಭಾರೀ ಅಂತರವಿದೆ ಎಂದು ಟೀಕಿಸಿದರು.

ಕೋವಿಡ್-19 ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದ್ದು ಸಾಕಷ್ಟು ಅಕ್ರಮ ನಡೆದಿದೆ ಎಂದು ಸಹ ಇಂದು ಸದನದಲ್ಲಿ ಕಾಂಗ್ರೆಸ್ ನಾಯಕರು ಆರೋಪಿಸಿದರು.

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ರಾಜ್ಯಸಭೆಯಲ್ಲಿ ಮಾತನಾಡಿ, ರೈತರು ದೇಶದ ಬೆನ್ನೆಲುಬಾಗಿದ್ದು, ಕಳೆದ ಗಣರಾಜ್ಯೋತ್ಸವ ದಿನ ನಡೆದ ಹಿಂಸಾಚಾರದ ಹಿಂದೆ ಸಮಾಜ ವಿರೋಧಿ ಶಕ್ತಿಗಳ ಪಾತ್ರ, ದುಷ್ಕರ್ಮಿಗಳ ಕೈವಾಡವಿತ್ತೆಂದು ಅನಿಸುತ್ತಿದೆ ಎಂದರು. ಈ ಘಟನೆಯನ್ನು ಎಲ್ಲಾ ಪಕ್ಷಗಳು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *

error: Content is protected !!