ಕ್ವಾರಂಟೈನ್ ನ ಹೊರಗಡೆ ಸುತ್ತಾಡಿದರೆ ಅದು ಜಿಲ್ಲಾಡಳಿತದ ವೈಫಲ್ಯ: ಅನ್ಸಾರ್

ಉಡುಪಿ: ಕೊರೋನಾ ವೈರಸ್ ನಿಂದಾಗಿ ಹೊರ ರಾಜ್ಯ ಹಾಗೂ  ಹೊರ ದೇಶದಲ್ಲಿ ಸಿಲುಕಿಕೊಂಡಿರುವವರನ್ನು ವಾಪಾಸು ಕರೆಸಿಕೊಳ್ಳಬೇಕು ಎಂಬ ಕೂಗು ಹೆಚ್ಚಾದ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕರ್ನಾಟಕದವರನ್ನು ವಾಪಸ್ ತರಿಸಿಕೊಂಡಿರುತ್ತದೆ. ವಾಪಸ್ಸು ಕರೆಸಿಕೊಳ್ಳುವ ಸಮಯದಲ್ಲಿ ಬಂದವರು ಕಡ್ಡಾಯ ಸರಕಾರಿ ಕ್ವಾರಂಟೈನ್ ನಲ್ಲಿರಬೇಕು  ಎಂಬ ಷರತ್ತನ್ನು ಹಾಕಿದ್ದು ಬರುವವರು ಅದನ್ನು ಒಪ್ಪಿಕೊಂಡೇ ಬಂದಿರುತ್ತಾರೆ.

 ಸರಕಾರಿ ಕ್ವಾರಂಟೈನ್ ಗಳಿಗೆ ಸೂಕ್ತ  ವ್ಯವಸ್ಥೆ ಮಾಡುವುದು ಸ್ಥಳೀಯ ಜಿಲ್ಲಾಡಳಿತದ ಹೊಣೆಗಾರಿಕೆಯಾಗಿದೆ. ಕ್ವಾರಂಟೈನ್ ನಲ್ಲಿರುವ ಪ್ರತಿಯೊಬ್ಬ ನಾಗರಿಕರ ಮೇಲೆ ಜಿಲ್ಲಾಡಳಿತ ನಿಗಾವಹಿಸ ಬೇಕಾಗಿರುತ್ತದೆ. ಇಂದು ಬೆಳಿಗ್ಗೆ ಮಾನ್ಯ  ಉಡುಪಿ ಜಿಲ್ಲಾಧಿಕಾರಿಯವರು ಸರಕಾರಿ ಕ್ವಾರಂಟೈನ್ ನಲ್ಲಿರುವವರು ಹೊರಗಡೆ ಸುತ್ತಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ ಹಾಗೂ ಅಂಥವರ ಮೇಲೆ ಕ್ರಿಮಿನಲ್ ಮೊಕದ್ದಮೆ  ಹೂಡಲಾಗುವುದು ಎಂಬ ಹೇಳಿಕೆಯನ್ನು ನೀಡಿರುತ್ತಾರೆ. 

ಒಂದು ವೇಳೆ ಸರಕಾರಿ ಕ್ವಾರಂಟೈನ್ ನಲ್ಲಿರುವವರು ಹೊರಗಡೆ ಬಂದು  ಸುತ್ತಾಡುತ್ತಿರುವಂತಹ ಘಟನೆ ನಡೆದಿದ್ದರೆ ಅವರನ್ನು ಹೊರಗಡೆ ಸುತ್ತಾಡಲು ಬಿಟ್ಟವರು ಯಾರು ಎಂಬ ಪ್ರಶ್ನೆ ನಮ್ಮ ಮುಂದೆ ಬರುತ್ತದೆ. ಅಂತಹವರ ಮೇಲೆ ನಿಗಾ ಇಡಲು ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ನಿಗಾ ಇಡಲು ಸೂಕ್ತ ವ್ಯವಸ್ಥೆ ಇದ್ದ ಮೇಲೂ ಅಲ್ಲಿಯವರು ಹೊರಗಡೆ ಬಂದಿದ್ದಾರೆ ಎಂದಾದರೆ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು ಏನು ಮಾಡುತ್ತಿದ್ದರು. ಅಧಿಕಾರಿಗಳು ಸ್ಥಳದಲ್ಲಿದ್ದು ಸಹ ಅವರು ಹೊರಗೆ ಬಂದಿದ್ದರೆ ಅಲ್ಲಿ ಕರ್ತವ್ಯನಿರತ ಅಧಿಕಾರಿಗಳನ್ನು ಮಾನ್ಯ ಜಿಲ್ಲಾಧಿಕಾರಿಗಳು ಅಮಾನತು  ಮಾಡಬೇಕು ಎಂಬುದು ನಮ್ಮ ವಿನಂತಿ.

 ಇಂತಹ ಘಟನೆಗಳು ಪುನರಾವರ್ತಿಸಿದರೆ  ಉಡುಪಿ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿರುವುದಿಲ್ಲ ಆದ್ದರಿಂದ ಮಾನ್ಯ  ಉಡುಪಿ ಜಿಲ್ಲಾಧಿಕಾರಿ ಯವರು ಕೂಡಲೇ ಸರಕಾರಿ ಕ್ವಾರಂಟೈನ್ ಕೇಂದ್ರಗಳ  ಸೂಕ್ತ ನಿರ್ವಹಣೆ ಬಗ್ಗೆ ಗಮನಹರಿಸಬೇಕು ಎಂದು  ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ಉಡುಪಿ  ಜಿಲ್ಲಾಧ್ಯಕ್ಷರಾದ ಅನ್ಸಾರ್ ಅಹಮದ್ ರವರು ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!