ಅಪ್ರಾಪ್ತೆ ಮೇಲೆ 17 ಕಾಮುಕರಿಂದ ಐದು ತಿಂಗಳು ಅತ್ಯಾಚಾರ – 8 ಮಂದಿ ಬಂಧನ
ಚಿಕ್ಕಮಗಳೂರು: 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 17 ಕಾಮುಕರು ಐದು ತಿಂಗಳ ಕಾಲ ನಿರಂತರ ಅತ್ಯಾಚಾರ ಎಸಗಿದ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಚಿಕ್ಕಮ್ಮ ಸೇರಿದಂತೆ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
ಕಾಮುಕರಿಗೆ ಸಹಕರಿಸಿದ ಬಾಲಕಿಯ ಚಿಕ್ಕಮ ಸೇರಿದಂತೆ 17 ಆರೋಪಿಗಳ ಪೈಕಿ 8 ಮಂದಿಯನ್ನು ಶೃಂಗೇರಿ ಪೊಲೀಸರು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
“ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದ ಅವಳ ಚಿಕ್ಕಮ್ಮ ಸೇರಿದಂತೆ ಎಂಟು ಆರೋಪಿಗಳನ್ನು ನಾವು ಬಂಧಿಸಿದ್ದೇವೆ. ಬಾಲಕಿಯನ್ನು ಲೈಂಗಿಕವಾಗಿ ಶೋಷಿಸಿದ ಇತರ ಒಂಬತ್ತು ಮಂದಿಯ ಬಂಧನಕ್ಕಾಗಿ ಶೋಧ ನಡೆಯುತ್ತಿದೆ” ಎಂದು ಅಧಿಕಾರಿ ಹೇಳಿದ್ದಾರೆ.
ಆರೋಪಿಗಳನ್ನು ಸಣ್ಣ ಅಭಿ, ಗಿರೀಶ್ ಆನೆಗುಂದ, ವಿಕಾಸ್, ಮಣಿಕಾಂತ, ಸಂಪತ್, ಅಶ್ವತ್ಗೌಡ, ರಾಜೇಶ್, ಅಮಿತ್, ಸಂತೋಷ್, ದೀಕ್ಷಿತ್, ಸಂತೋಷ್, ನಿರಂಜನ್, ನಯನಗೌಡ, ಅಭಿಗೌಡ ಮತ್ತು ಯೋಗೀಶ್ ಎಂದು ಗುರುತಿಸಲಾಗಿದೆ.
ಶೃಂಗೇರಿ ಪೊಲೀಸರು ದಾಖಲಿಸಿರುವ ಎಫ್ಐಆರ್ ಪ್ರಕಾರ, ಈ 15 ಆರೋಪಿಗಳಲ್ಲದೆ, ಇತರರು ಸಹ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದು, ಎಲ್ಲಾ ಅಪರಾಧಿಗಳನ್ನು ಬಂಧಿಸಲು ಮ್ಯಾನ್ಹಂಟ್ ಆರಂಭಿಸಿದ್ದಾರೆ.
ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡಿದ್ದ ಬಾಲಕಿಯನ್ನು ಹಾವೇರಿಯಲ್ಲಿ 7ನೇ ತರಗತಿ ಮುಗಿಸುವವರೆಗೂ ಅವರ ಚಿಕ್ಕಪ್ಪ ನೋಡಿಕೊಳ್ಳುತ್ತಿದ್ದರು. ಬಾಲಕಿ ತಂದೆ ಮತ್ತೊಂದು ಮದುವೆಯಾದ ನಂತರ ಬಾಲಕಿಯನ್ನು ತಾಯಿಯ ಸಂಬಂಧಿಯಾದ ಚಿಕ್ಕಮ್ಮ ಶೃಂಗೇರಿಗೆ ಕರೆತಂದಿದ್ದರು. ಇಲ್ಲಿ ಚಿಕ್ಕಮ್ಮ ಮತ್ತು ಚಿಕ್ಕಪ್ಪನೊಂದಿಗೆ ವಾಸಿಸುತ್ತಿದ್ದಳು ಎಂದು ಚಿಕ್ಕಮಗಳೂರು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುಬ್ರಮಣ್ಯ ಜಿ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿಗಳು ಬಾಲಕಿಗೆ ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಹಾಕುವುದಾಗಿ ಬ್ಲಾಕ್ ಮೇಲ್ ಮಾಡಿ ಪದೇಪದೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಕಾಮುಕರ ಕೃತ್ಯ ಬಾಲಕಿಯ ಚಿಕ್ಕಮ್ಮನ ಗಮನಕ್ಕೆ ಬಂದಿದ್ದರೂ ಪೊಲೀಸರಿಗೆ ದೂರು ನೀಡದೆ ಆರೋಪಿಗಳಿಗೆ ಸಹಕರಿಸಿದ್ದಾರೆ. ಈ ಸಂಬಂಧ ಬಾಲಕಿ ಚಿಕ್ಕಮ ಹಾಗೂ 15 ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಕೇಸ್ ದಾಖಲಿಸಿದ್ದಾರೆ.