ಸಿಬಿಎಸ್ಇ 10, 12ನೇ ತರಗತಿಯ ಪರೀಕ್ಷಾ ವೇಳಾಪಟ್ಟಿ ಪ್ರಕಟ
ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಇ) ಮಂಗಳವಾರ 10 ಮತ್ತು 12ನೇ ತರಗತಿಗಳ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು cbse.nic.in ನಲ್ಲಿ ಲಭ್ಯವಿದೆ.
ಪರೀಕ್ಷೆಯು ಆಫ್ಲೈನ್ ಲಿಖಿತ ಕ್ರಮದಲ್ಲಿ ನಡೆಯಲಿದ್ದು, ಪ್ರಶ್ನೆಪತ್ರಿಕೆಗಳು ಶೇ.33 ರಷ್ಟು ಆಂತರಿಕ ಆಯ್ಕೆ ಪ್ರಶ್ನೆಗಳನ್ನು ಹೊಂದಿರುತ್ತದೆ. ಪರೀಕ್ಷೆಯ ಪಠ್ಯಕ್ರಮವನ್ನು ಸಹ ಶೇ.30ರವರೆಗೆ ಕಡಿತಗೊಳಿಸಲಾಗಿದೆ.
ಮೇ 4 ರಿಂದ ಜೂ.10 ರವರೆಗೆ ನಡೆಯಲಿರುವ ಪರೀಕ್ಷೆಗಳಲ್ಲಿ ಸುಮಾರು 30 ಲಕ್ಷ ವಿದ್ಯಾರ್ಥಿಗಳು ಹಾಜರಾಗುವ ಸಾಧ್ಯತೆ ಇದೆ. ಮಾ. 1 ರಿಂದ ಶಾಲೆಗಳು ಕೋವಿಡ್-19 ಸಾಂಕ್ರಾಮಿಕ ಪ್ರೋಟೋಕಾಲ್ಗಳನ್ನು ಅನುಸರಿಸಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಿವೆ. ಫಲಿತಾಂಶವನ್ನು ಜುಲೈ 15ರಂದು ಪ್ರಕಟಿಸಲಾಗುವುದು.
ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ‘ನಿಶಾಂಕ್’ ದಿನಾಂಕದ ವೇಳಾಪಟ್ಟಿ ಘೋಷಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.