ಬೆಂಗಳೂರು ಎಟಿಎಂ ದಾಳಿ ಪ್ರಕರಣ: ಆರೋಪಿ ಮಧುಕರ್ ರೆಡ್ಡಿಗೆ 12 ವರ್ಷ ಜೈಲು ಶಿಕ್ಷೆ
ಬೆಂಗಳೂರು: 2013ರಲ್ಲಿ ಬೆಂಗಳೂರು ನಗರ ಕಾರ್ಪೋರೇಷನ್ ವೃತ್ತದಲ್ಲಿನ ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಮದುಕರ್ ರೆಡ್ಡಿಗೆ 12 ವರ್ಷ ಜೈಲು ಶಿಕ್ಷೆ ಆಗಿದೆ. ನಗರದ 65ನೇ ಸಿಸಿಎಚ್ ಕೋರ್ಟ್ ಮಧುಕರ್ ರೆಡ್ಡಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ನವೆಂಬರ್ 19, 2013ರ ಬೆಳಗ್ಗೆ ಎಟಿಎಂ ಗೆ ಹಣ ವಿತ್ ಡ್ರಾಗೆ ಬಂದಿದ್ದ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಮಹಿಳೆ ಜ್ಯೋತಿ ಉದಯ್ ಎನ್ನುವವರ ಮೇಲೆ ಆರೋಪಿ ಮಧುಕರ್ ಪ್ರಾಣಾಂತಿಕ ಹಲ್ಲೆ ನಡೆಸಿದ್ದ. ಹಲ್ಲೆಗೊಳಗಾಗಿದ್ದ ಜ್ಯೋತಿ ಆರು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಎಸ್.ಜೆ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ, ಕಾರ್ಪೋರೇಷನ್ ಸರ್ಕಲ್ನಲ್ಲಿದ್ದ ಎಟಿಎಂ ನಲ್ಲಿ ನಡೆದಿದ್ದ ಈ ಘಟನೆ ಬೆಂಗಳೂರಿಗರನ್ನು ಬೆಚ್ಚಿ ಬೀಳುವಂತೆ ಮಾಡಿತ್ತು.
ಹಲ್ಲೆ ನಡೆಸಿ ಹಣದೊಡನೆ ಪರಾರಿಯಾಗಿದ್ದ ಆರೋಪಿ ಹಲವಾರು ವರ್ಷಗಳ ಕಾಲ ನಾಪತ್ತೆಯಾಗಿದ್ದ. ಆದರೆ ಫೆಬ್ರವರಿ 2017 ರಲ್ಲಿ ಮದನಪಲ್ಲಿ ಪೊಲೀಸರು ಆತನನ್ನು ಬಂಧಿಸುವಲ್ಲಿ ಸಫಲವಾಗಿದ್ದರು.
ಬಾಡಿ ವಾರಂಟ್ ನೊಂದಿಗೆ ಆರೋಪಿಯನ್ನು ಬೆಂಗಳೂರಿಗೆ ಕರೆತಂದಿದ್ದ ಪೋಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನಾಲ್ಕು ವರ್ಷ ಕಾಲ ವಾದ ಆಲಿಸಿದ್ದ ನ್ಯಾಯಾಲಯ ನಿನ್ನೆ ಮಧುಕರ್ ರೆಡ್ಡಿ ಅಪರಾಧಿ ಎಂದು ತೀರ್ಪು ಕೊಟ್ಟಿತ್ತು.