ಉಡುಪಿ: ಫೆ.5 ರಿಂದ 7 ಅವಿಭಜಿತ ಜಿಲ್ಲೆಯ ಪ್ರಪ್ರಥಮ ಕೊರಗ ಕ್ರೀಡೋತ್ಸವ
ಉಡುಪಿ: ಅವಿಭಜಿತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮೂಲನಿವಾಸಿಗಳಾದ ಕೊರಗ ಜನಾಂಗದವರು, ಮೂಲತ: ಸಂಕೋಚ ಸ್ವಭಾವದವರು, ತಮ್ಮ ಜನಾಂಗದವರ ಹೊರತು ಇತರರೊಂದಿಗೆ ಹೆಚ್ಚು ಬೆರೆಯುವುದಿಲ್ಲ,ಇವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದು ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಸಲುವಾಗಿ, ಇದೇ ಪ್ರಪ್ರಥಮ ಬಾರಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ವತಿಯಿಂದ ಫೆಬ್ರವರಿ 5 ರಿಂದ 7 ರ ವರೆಗೆ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಅಂತರ್ ಜಿಲ್ಲಾಮಟ್ಟದ ಕೊರಗರ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಉತ್ಸವವು ಉಡುಪಿ ಜಿಲ್ಲಾ ಕ್ರೀಡಾಂಗಣ ಮತ್ತು ಬೀಡಿನಗುಡ್ಡೆಯ ಮೈದಾನದಲ್ಲಿ ನಡೆಯಲಿದೆ.
ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೊರಗ ಸಮುದಾಯದವರಿಗೆ ಮಾತ್ರ ಈ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮೀಸಲಾಗಿದ್ದು, ಕ್ರೀಡಾ ಸ್ಪರ್ಧೆಗಳು 14 ವರ್ಷದೊಳಗಿನ ಬಾಲಕ /ಬಾಲಕಿಯರು, 16 ವರ್ಷದೊಳಗಿನ ಬಾಲಕ /ಬಾಲಕಿಯರು, 18 ವರ್ಷದೊಳಗಿನ ಯುವಕ /ಯುವತಿಯರು, 20 ವರ್ಷದೊಳಗಿನ ಯುವಕ/ಯುವತಿಯರು, 20 ವರ್ಷ ಮೇಲ್ಪಟ್ಟ ಯುವಕ /ಯುವತಿಯರ ವಿಬಾಗದಲ್ಲಿ ನಡೆಯಲಿದ್ದು, ವಿವಿಧ ದೂರದ ಓಟದ ಸ್ಪರ್ಧೆ, ಗುಂಡು ಎಸೆತ, ಉದ್ದ ಜಿಗಿತ, ಹಗ್ಗ ಜಗ್ಗಾಟ ಸ್ಪರ್ಧೆಗಳಿದ್ದು, ಎಲ್ಲಾ ವಿಭಾಗದ ವಿಜೇತ ಕ್ರೀಡಾಪಟುಗಳಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪದಕ ನೀಡಲಾಗುವುದು. ಪುರುಷರ ವಿಭಾಗದಲ್ಲಿ ವಾಲಿಬಾಲ್, ಕಬಡ್ಡಿ, ಕ್ರಿಕೆಟ್, ಮತ್ತು ಮಹಿಳೆಯರ ವಿಭಾಗದಲ್ಲಿ ಥ್ರೋಬಾಲ್, ಕೇರಂ, ಚೆಸ್ ಸೇರಿದಂತೆ ವಿವಿಧ ಸ್ಪರ್ಧೆಗಳು ಮತ್ತು ಬಿರು (ಚಿಟ್ ಬಿಲ್/ಗುರಿಇಡುವ ಸ್ಪರ್ಧೆ) ಸಹ ಆಯೋಜಿಸಲಾಗಿದ್ದು, ಸಾಂಸ್ಕೃತಿಕ ಸ್ಪರ್ಧೆಯೂ ನಡೆಯಲಿದೆ.
ಕನಿಷ್ಠ 10 ಮಂದಿ ಕಲಾವಿದರನ್ನು ಒಳಗೊಂಡ ಕಲಾತಂಡಗಳಿಗೆ ಗೌರವಧನ ನೀಡಲಾಗುತ್ತಿದ್ದು, ಉಡುಪಿ ತಾಲೂಕಿನ ತಂಡಗಳಿಗೆ 5000, ಬ್ರಹ್ಮಾವರ ಮತ್ತು ಕಾಪು ತಾಲೂಕಿನ ತಂಡಗಳಿಗೆ 7000, ಬೈಂದೂರು, ಕಾರ್ಕಳ, ಹೆಬ್ರಿ ಹಾಗೂ ದ.ಕನ್ನಡ ಜಿಲ್ಲೆಯ ಕಲಾತಂಡಗಳಿಗೆ 10000 ನೀಡಲಾಗುವುದು. ಬುಟ್ಟಿ ಹೆಣೆಯುವ ಪ್ರಾತ್ಯಕ್ಷಿಕೆ ಸಹ
ಆಯೋಜಿಸಿದ್ದು, ಪ್ರತೀ ಕಲಾವಿದರಿಗೆ 2000 ಗೌರವಧನ ನೀಡಲಾಗುವುದು.
ಕ್ರೀಡೋತ್ಸವದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಈಗಾಗಲೇ ಕ್ರಿಕೆಟ್‌ಗೆ 56 ತಂಡಗಳು, ವಾಲಿಬಾಲ್‌ಗೆ 35, ಥ್ರೋಬಾಲ್‌ಗೆ 25 ತಂಡಗಳು ನೊಂದಣಿ ಮಾಡಿಕೊಂಡಿದ್ದು, ಕ್ರೀಡೋತ್ಸವದಲ್ಲಿ ಸುಮಾರು 3000 ಕ್ಕೂ ಅಧಿಕ ಕೊರಗ ಸಮುದಾಯದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಕೊರಗ ಸಮುದಾಯದ ವೈವಿಧ್ಯಮಯ ಕಲೆ ಸಂಸ್ಕೃತಿಯನ್ನು ಅನಾವರಣಗೊಳಿಸುವ ಈ ಕ್ರೀಡೋತ್ಸವವನ್ನು 15ಲಕ್ಷ ರೂ. ವೆಚ್ಚದಲ್ಲಿ ಆಯೋಜಿಸುತ್ತಿದ್ದು, ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋವಿಡ್ ನಿಯಮಗಳನ್ವಯ ಕ್ರೀಡಾಕೂಟ ನಡೆಸಲಾಗುತ್ತಿದ್ದು, ಇದೇ ಪ್ರಥಮ
ಬಾರಿಗೆ ಅವಿಭಜಿತ ಜಿಲ್ಲೆಯ ಎಲ್ಲಾ ಕೊರಗ ಸಮುದಾಯದವರು ಒಂದೆಡೆ ಸೇರಿ ಸಂಭ್ರಮಿಸಲು ಕ್ರೀಡಾಕೂಟ ವೇದಿಕೆಯಾಗಲಿದೆ ಹಾಗೂ ಸಾರ್ವಜನಿಕರಿಗೆ ಕೊರಗ ಸಮುದಾಯದ ವೈವಿಧ್ಯಮಯ ಶ್ರೀಮಂತ ಕಲೆಯನ್ನು ಆಸ್ಪಾದಿಸಲು ಸಾಧ್ಯವಾಗಲಿದೆ ಎನ್ನುತ್ತಾರೆ ಜಿಲ್ಲಾ ಕ್ರೀಡಾಂಗಣ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ
ಜಿ.ಜಗದೀಶ್.