ಉದ್ಯಾವರ ಆಯುರ್ವೇದ ಕಾಲೇಜು – ಜಾಗೃತಿ ಸಪ್ತಾಹದ ಉದ್ಘಾಟನೆ
ಉಡುಪಿ: ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಕುತ್ಪಾಡಿಯ ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ವಿಭಾಗದಿಂದ ಗರ್ಭಾಶಯದ ಕೊರಳಿನ ಕ್ಯಾನ್ಸರ್ ಹಾಗೂ ಸ್ತನದ ಕ್ಯಾನ್ಸರ್ನ ಉಚಿತ ತಪಾಸಣೆ ಹಾಗೂ ಜಾಗೃತಿ ಸಪ್ತಾಹದ ಉದ್ಘಾಟನಾ ಸಮಾರಂಭ ಸೋಮವಾರ ನಡೆಯಿತು.
ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಹಾಗೂ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಡಾ. ಮಮತಾ ಕೆ. ವಿ. ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಬಿಂದು ರೋಬರ್ಟ್ ಮಾತನಾಡಿ ಎಲ್.ಐ.ಸಿ.ಯ ಕ್ಯಾನ್ಸರ್ ಕವರ್ ವಿಮೆಯ ಬಗ್ಗೆ ಮಾಹಿತಿಯನ್ನು ನೀಡಿದರು ಮತ್ತು ಗರ್ಭಾಶಯದ ಕೊರಳು ಮತ್ತು ಸ್ತನದ ಕ್ಯಾನ್ಸರ್ನ ಉಚಿತ ತಪಾಸಣೆ ಮತ್ತು ಮಾಹಿತಿ ಶಿಬಿರವು ಶ್ಲಾಘನೀಯ ಎಂದು ವರ್ಣಿಸಿದರು. ಮಾರ್ಕೆಟಿಂಗ್ ಮ್ಯಾನೇಜರ್ ವೆಂಕಟರಮಣ ಶಿರೂರುರವರು ಎಲ್.ಐ.ಸಿ.ಯ ಜೀವನ ಆರೋಗ್ಯ ವಿಮೆಯ ಮಾಹಿತಿಯನ್ನು ವಿವರಿಸಿದರು. ಡಾ. ಮಮತಾ ಕೆ.ವಿ.ಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಹಿಳೆಯರು ನಿಯಮಿತವಾಗಿ ತಪಾಸಣೆಗೆ ಒಳಗಾಗುವುದರಿಂದ ಆರಂಭಿಕ ಹಂತದಲ್ಲಿ ರೋಗವನ್ನು ಪತ್ತೆ ಹಚ್ಚಿ ಅದರ ಸುಲಭ ಚಿಕಿತ್ಸೆಯು ಸಾಧ್ಯವಾಗುತ್ತದೆ ಹಾಗೂ ಈ ಉಚಿತ ತಪಾಸಣೆ ಹಾಗೂ ಮಾಹಿತಿ ಶಿಬಿರವು ಫೆಬ್ರವರಿ 7ರವರೆಗೆ ಬೆಳಿಗ್ಗೆ 9 ರಿಂದ 5ರ ತನಕ ನಡೆಯಲಿದ್ದು, ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕಾಗಿ ವಿನಂತಿಸಿದರು.
ಸ್ನಾತಕೋತ್ತರ ವಿಭಾಗದ ಡೀನ್ ಡಾ. ನಿರಂಜನ್ ರಾವ್, ಎಲ್.ಐ.ಸಿ. ಆಫ್ ಇಂಡಿಯಾ, ಉಡುಪಿ ಶಾಖೆಯ ಸೀನಿಯರ್ ಡಿವಿಜನಲ್ ಮ್ಯಾನೇಜರ್ ಬಿಂದು ರೋಬರ್ಟ್, ಮಾರ್ಕೆಟಿಂಗ್ ಮ್ಯಾನೇಜರ್ ವೆಂಕಟರಮಣ ಶಿರೂರು, ಆರೋಗ್ಯ ವಿಮೆ ವ್ಯವಸ್ಥಾಪಕರಾದ ಮೋಹನ್ದಾಸ್, ಎಲ್.ಐ.ಸಿ. ಆಫ್ ಇಂಡಿಯಾ, ಉಡುಪಿ ಶಾಖೆಯ ಉಷಾ ಶೆಟ್ಟಿ, ಸ್ತ್ರೀರೋಗ ವಿಭಾಗದ ಆರ್.ಎಮ್.ಓ ಡಾ. ವೀಣಾ ಮಯ್ಯ, ಸಹಪ್ರಾಧ್ಯಾಪಕರಾದ ಡಾ. ಸುಚೇತ ಕುಮಾರಿ, ಸಹಾಯಕ ಪ್ರಾಧ್ಯಾಪಕರಾದ ಡಾ. ಅರ್ಪಣ ಜೈನ್, ಡಾ. ರೇಶ್ಮಿ ಉಪಸ್ಥಿತರಿದ್ದರು.
ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ವಿಭಾಗದ ಪ್ರಾಧ್ಯಾಪಕರಾದ ಡಾ. ರಮಾದೇವಿ ಜಿ.ಯವರು ಸ್ವಾಗತಿಸಿ, ಸಹಪ್ರಾಧ್ಯಾಪಕರಾದ ಡಾ. ವಿದ್ಯಾ ಬಲ್ಲಾಳ್ ಕೆ. ವಂದಿಸಿದರು. ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ. ಅರ್ಚನಾ ಪ್ರಾರ್ಥಿಸಿ, ಡಾ. ಧರಿತ್ರಿ ಹಾಗೂ ಡಾ. ಅದ್ರಿಜರವರು ಕಾರ್ಯಕ್ರಮವನ್ನು ನಿರೂಪಿಸಿದರು.