ರಾಮನ ಭಾರತದಲ್ಲಿ ಪೆಟ್ರೋಲ್ ದರ 93 ರೂ., ರಾವಣನ ಲಂಕೆಯಲ್ಲಿ 51 ರೂ. – ಸ್ವಪಕ್ಷೀಯರಿಂದಲೇ ಕಿಡಿ!

ನವದೆಹಲಿ: ಸ್ವಪಕ್ಷೀಯ ಸರ್ಕಾರದ ವಿರುದ್ಧ ಮುಲಾಜಿಲ್ಲದೇ ಟೀಕೆ ಮಾಡುವ ಸುಬ್ರಹ್ಮಣಿಯನ್ ಸ್ವಾಮಿ ಈಗ ಮತ್ತೊಮ್ಮೆ ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

ಈ ಬಾರಿ ಪೆಟ್ರೋಲ್ ಬೆಲೆ ವಿಷಯಕ್ಕಾಗಿ ಕೇಂದ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಬ್ರಹ್ಮಣಿಯನ್ ಸ್ವಾಮಿ, ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಫೋಟೋ ವೈರಲ್ ಆಗತೊಡಗಿದೆ. 

ಕೇಂದ್ರ ಬಜೆಟ್-2021 ಮಂಡನೆಯಾದ ಬಳಿಕ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಈ ಫೋಟೋ ಹಂಚಿಕೊಂಡಿರುವುದು ಮಹತ್ವ ಪಡೆದುಕೊಂಡಿದೆ. 

ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಸ್ವಾಮಿ, ರಾಮನ ಭಾರತದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 93 ರೂಪಾಯಿಗಳಾಗಿದೆ. ಸೀತೆಯ ನೇಪಾಳದಲ್ಲಿ ಪ್ರತಿ ಲೀಟರ್ ಗೆ 53 ರೂಪಾಯಿಗಳಾಗಿದ್ದರೆ ರಾವಣನ ಲಂಕೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 51 ರೂಪಾಯಿಗಳು ಎಂದು ಬರೆದಿದ್ದು, ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಸತತ 6ನೇ ದಿನ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗದೇ ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ದೆಹಲಿ ಹಾಗೂ ಮುಂಬೈ ಗಳಲ್ಲಿ ಪೆಟ್ರೋಲ್ ಬೆಲೆ ಅನುಕ್ರಮವಾಗಿ ಪ್ರತಿ ಲೀಟರ್ ಗೆ 86.30 ರೂಪಾಯಿ ಹಾಗೂ 92.86 ರೂಪಾಯಿಗಳಷ್ಟಾಗಿದೆ. 

ಡೀಸೆಲ್ ಬೆಲೆ ರಾಷ್ಟ್ರ ರಾಜಧಾನಿಯಲ್ಲಿ 76.48 ರೂಪಾಯಿಗಳಿದ್ದರೆ ಮುಂಬೈ ನಲ್ಲಿ 83.30 ರೂಪಾಯಿಗಳಷ್ಟಾಗಿದೆ. ಇಂಧನದ ಮೇಲೆ ವಿಧಿಸಲಾಗಿರುವ ಕೃಷಿ ಸೆಸ್ ನಿಂದಾಗಿ ತೈಲ ಬೆಲೆ ಏರಿಕೆಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. 

Leave a Reply

Your email address will not be published. Required fields are marked *

error: Content is protected !!