ಕೇಂದ್ರ ಬಜೆಟ್ 2021: ಪಿಪಿಪಿ ಮಾದರಿಯಲ್ಲಿ ಏಳು ಬಂದರು ಅಭಿವೃದ್ಧಿ ಯೋಜನೆ ಘೋಷಣೆ
ನವದೆಹಲಿ: ಪಿಪಿಪಿ ಮಾದರಿಯಲ್ಲಿ ದೇಶದಲ್ಲಿ ಏಳು ಬಂದರು ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸಂಸತ್ ನಲ್ಲಿ ಇಂದು ಕೇಂದ್ರ ಬಜೆಟ್ 2021ನ್ನು ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರು, ಸುಮಾರು 2 ಸಾವಿರ ಕೋಟಿ ರೂಗೂ ಹೆಚ್ಚು ಹೂಡಿಕೆಯ ಏಳು ಬಂದರು ಅಭಿವೃದ್ಧಿ ಯೋಜನೆಗಳನ್ನು ಬಜೆಟ್ನಲ್ಲಿ ಪ್ರಕಟಿಸಲಾಗಿದೆ. ಈ ಬಂದರು ಅಭಿವೃದ್ಧಿ ಯೋಜನೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ಪ್ರಸ್ತುತ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ದೀನದಯಾಳ್ (ಕಾಂಡ್ಲಾ), ಮುಂಬೈ, ಜೆಎನ್ಪಿಟಿ, ಮರ್ಮಾ ಗೋವಾ, ನವ ಮಂಗಳೂರು, ಕೊಚ್ಚಿನ್, ಚೆನ್ನೈ, ಕಾಮರಾಜ್ನಗರ (ಎನ್ನೊರೆ), ಚಿದಂಬರನಾರ್, ವಿಶಾಖಪಟ್ಟಣಂ, ಪಾರದೀಪ್ ಮತ್ತು ಕೋಲ್ಕತ್ತಾ (ಹಲ್ಡಿಯಾ ಸೇರಿದಂತೆ)ದಂತಹ 12 ಬೃಹತ್ ಬಂದರುಗಳಿವೆ.
ಈ ಪಟ್ಟಿಗೆ ಮುಂದಿನ ದಿನಗಳಲ್ಲಿ ಮತ್ತೆ 7 ಹೊಸ ಬಂದರುಗಳು ಸೇರ್ಪಡೆಯಾಗಲಿವೆ.