ಐಟಿ ವಿನಾಯಿತಿಯಲ್ಲಿ ಇಲ್ಲ ಬದಲಾವಣೆ: 75 ವರ್ಷ ಮೇಲ್ಪಟ್ಟವರಿಗೆ ಗುಡ್ ನ್ಯೂಸ್
ನವದೆಹಲಿ: ಕೊರೋನಾದಿಂದ ಕಂಗೆಟ್ಟಿದ್ದ ಆರ್ಥಿಕ ವ್ಯವಸ್ಥೆಯನ್ನು ಮೇಲೆತ್ತುವುದಕ್ಕಾಗಿ 2021 ರ ಬಜೆಟ್ ನಲ್ಲಿ ಸೆಸ್, ತೆರಿಗೆ ಹೆಚ್ಚಿಸಲಾಗುತ್ತದೆ ಎಂಬ ಆತಂಕ ದೂರಾಗಿದೆ.
ಇಂದು ಬಜೆಟ್ ಮಂಡನೆ ಮಾಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆದಾಯ ತೆರಿಗೆ ವಿನಾಯಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದು, ಆದಾಯ ತೆರಿಗೆ ಯಥಾ ಸ್ಥಿತಿಯಲ್ಲೇ ಮುಂದುವರೆಯಲಿದೆ
ಇದೇ ವೇಳೆ 75 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರು, ಪಿಂಚಣಿಯಿಂದ ಬರುವ ಆದಾಯ, ಠೇವಣಿ ಮೇಲಿನ ಬಡ್ಡಿಗೆ ಐಟಿ ರಿಟರ್ನ್ಸ್ ಸಲ್ಲಿಸುವುದರಿಂದ ವಿನಾಯಿತಿ ನೀಡಲಾಗಿದೆ.
ಇದರಿಂದ ಒಂದು ಪಿಂಚಣಿ ಹಾಗೂ ಒಂದೇ ಬಡ್ಡಿಯ ಯೋಜನೆ ಹೊಂದಿರುವ 75 ವರ್ಷಗಳ ಹಿರಿಯ ನಾಗರಿಕರಿಗೆ ಮಾತ್ರ ಈ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ವಿನಾಯಿತಿ ಅನ್ವಯವಾಗಲಿದ್ದು, ಬಹುಮೂಲಗಳಿಂದ ಆದಾಯ ಹಾಗೂ ಬಡ್ಡಿಯ ಯೋಜನೆ ಹೊಂದಿರುವ ಹಿರಿಯ ನಾಗರಿಕರಿಗೆ ಇದು ಅನ್ವಯವಾಗುವುದಿಲ್ಲ ಎಂಬುದು ಗಮನಾರ್ಹವಾಗಿದೆ. ಇನ್ನು ಕೊರೋನಾ ಸೆಸ್ ವಿಧಿಸಲಾಗುತ್ತದೆ ಎಂಬ ಆತಂಕವೂ ಸಹ ದೂರಾಗಿದ್ದು, ಕೊರೋನಾ ಸೆಸ್ ನ್ನು ಕೇಂದ್ರ ಸರ್ಕಾರ ವಿಧಿಸಿಲ್ಲ.