ರೈಲ್ವೇ ಇಲಾಖೆಗೆ 1,10,055 ಕೋಟಿ ರೂ ಅನುದಾನ ಮೀಸಲು
ನವದೆಹಲಿ: ಕೇಂದ್ರ ಬಜೆಟ್ 2021ರಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ರೈಲ್ವೇ ಇಲಾಖೆಗೆ 1,10,055 ಕೋಟಿ ರೂ ಅನುದಾನ ಮೀಸಲಿಟ್ಟಿರುವುದಾಗಿ ಘೋಷಣೆ ಮಾಡಿದ್ದಾರೆ.
ಹೌದು.. ಸಂಸತ್ ನಲ್ಲಿ ಇಂದು ಕೇಂದ್ರ ಆಯವ್ಯಯ 2021ನ್ನು ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರು, ರೈಲ್ವೇ ಇಲಾಖೆಗೆ 1,10,055 ಕೋಟಿ ರೂ ಅನುದಾನ ಮೀಸಲಿಟ್ಟಿದ್ದು. ಕಳೆದ ಬಾರಿಯ ರೈಲ್ವೇ ಬಜೆಟ್ ಗಿಂತ 40,055 ಕೋಟಿ ರೂ ಹೆಚ್ಚಿನದ್ದು ಎಂದು ಹೇಳಿದರು. ಕಳೆದ ವರ್ಷ ರೈಲ್ವೇ ಇಲಾಖೆಗೆ 70,000 ಕೋಟಿ ರೂ ಮೀಸಲಿಡಲಾಗಿತ್ತು.
ನಾನು ರೈಲ್ವೆಗಾಗಿ ₹ 1,10,055 ಕೋಟಿ ದಾಖಲೆಯ ಹಣ ನೀಡುತ್ತಿದ್ದೇನೆ. ಅದರಲ್ಲಿ 1,07,100 ಕೋಟಿ ರೂ. ಬಂಡವಾಳ ವೆಚ್ಚಕ್ಕೆ ಮಾತ್ರ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಅಂತೆಯೇ ರೈಲ್ವೇಗಾಗಿ ಮೀಲಿಟ್ಟಿರುವ ಬಜೆಟ್ ನಲ್ಲಿ ನಾಲ್ಕು ಹೊಸ ರೈಲ್ವೆ ಕಾರಿಡಾರ್ ಯೋಜನೆಗಳ ಘೋಷಣೆ ಮಾಡಿದರು.
46,000 ಕಿ.ಮೀ. ಈ ವರ್ಷ ಬ್ರಾಡ್ಗೇಜ್ ಹಳಿ ಪರಿವರ್ತನೆ ಘೋಷಣೆ ಮಾಡಲಾಗಿದ್ದು, ಭವಿಷ್ಯಕ್ಕೆ ಸಿದ್ಧವಾಗಿರುವ ರೈಲ್ವೆ ವ್ಯವಸ್ಥೆಯನ್ನು ನಾವು ರೂಪಿಸುತ್ತೇವೆ. ಜೂನ್ 2022ರ ಒಳಗೆ ಎರಡು ಕಾರಿಡಾರ್ ಪೂರ್ಣಗೊಳಿಸುತ್ತೇವೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೆಲ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು.
2023ರ ಡಿಸೆಂಬರ್ ಒಳಗೆ ಎಲ್ಲ ಬ್ರಾಡ್ಗೇಜ್ ಹಳಿಗಳ ವಿದ್ಯುದೀಕರಣ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಹೇಳಿದರು. ಇನ್ನು ಹೆಚ್ಚು ಬೇಡಿಕೆಯಲ್ಲಿರುವ ಮತ್ತು ಹೆಚ್ಚು ರೈಲು ಸಂಚಾರವಿರುವ ಮಾರ್ಗಗಳಲ್ಲಿ ಸ್ವಯಂಚಾಲಿತ ರಕ್ಷಣಾ ವ್ಯವಸ್ಥೆಯನ್ನು ಜಾರಿಗೊಳಿಸುತ್ತೇವೆ ಎಂದು ಹೇಳಿದರು.