ಉದ್ಯಾವರ: ಕಲಾಯಿಬೈಲ್ ಮಹಿಳೆಯ ವರದಿ ನೆಗೆಟಿವ್

ಉದ್ಯಾವರ: ಮುಂಬೈಯಿಂದ ಆಗಮಿಸಿ 13 ದಿನದ ಕ್ವಾರಂಟೈನ್ ಮುಗಿಸಿ ಮನೆಗೆ ಬಂದಿದ್ದ 26 ವರ್ಷದ ಮಹಿಳೆಗೆ ಶನಿವಾರ ಜೂನ್ 6 ರಂದು ಕೊರೋನ ಪಾಸಿಟಿವ್ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಅದರಂತೆ ಮಹಿಳೆಯನ್ನು ಕಲಾಯಿಬೈಲ್ ಮನೆಯಿಂದ ಕಾರ್ಕಳದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕೇವಲ ಮೂರು ದಿನದ ಬಳಿಕ ಇಂದು ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಮಹಿಳೆಯನ್ನು ಸರಕಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಮೇ 13ರಂದು ಮುಂಬೈಯಿಂದ ಉಡುಪಿಗೆ ಆಗಮಿಸಿದ್ದ ಮಹಿಳೆಯನ್ನು ಕಾರ್ಕಳದಲ್ಲಿ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. 13 ದಿನದ ಕ್ವಾರಂಟೈನ್ ಮುಗಿಸಿ ಮಹಿಳೆ ಉದ್ಯಾವರ ಕಲಾಯಿಬೈಲ್ ತನ್ನ ನಿವಾಸಕ್ಕೆ ಆಗಮಿಸಿದ್ದರು. ಆದರೆ ಶನಿವಾರ ಜೂನ್ 6 ರಂದು ಅಧಿಕಾರಿಗಳು ಹಾಗೂ ಪಂಚಾಯತ್ ಪ್ರಮುಖರು ಮಹಿಳೆ ವಾಸವಿದ್ದ ಮನೆಗೆ ಆಗಮಿಸಿ ಕೋರೋನ ಪಾಸಿಟಿವ್ ಇದೆ ಎಂದು ತಿಳಿಸಿ ಸಂಜೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು .

ಮಾತ್ರವಲ್ಲದೆ  ಮಹಿಳೆ ವಾಸವಿದ್ದ ಮನೆಯನ್ನು ಸೀಲ್ ಡೌನ್ ಮಾಡಲಾಗಿತ್ತು. ಇದರಿಂದ ಮನೆಯವರಲ್ಲಿ ಮತ್ತು  ಉದ್ಯಾವರದ ನಿವಾಸಿಗಳಲ್ಲಿ ಆತಂಕ ಮನೆ ಮಾಡಿತ್ತು.  ಆದರೆ ಕೇವಲ ಮೂರೇ ದಿನದ ಅಂತರದಲ್ಲಿ ನೆಗೆಟಿವ್ ವರದಿ ಬಂದಿದ್ದು, ಮನೆಯವರಿಗೆ ಮತ್ತು ಸಾರ್ವಜನಿಕರಿಗೆ ನೆಮ್ಮದಿ ಉಂಟು ಮಾಡಿದೆ. ಆದರೆ ಆರೋಗ್ಯ ಇಲಾಖೆಯ ಇಂತಹ ವರದಿಗಳು ಜನಸಾಮಾನ್ಯರನ್ನು ಆತಂಕಕ್ಕೆ ಮತ್ತು ಗೊಂದಲಕ್ಕೆ ಒಳಪಡುವಂತೆ ಮಾಡಿವೆ.

Leave a Reply

Your email address will not be published. Required fields are marked *

error: Content is protected !!