ಕುಂದಾಪುರ: ಯುವತಿಗೆ ವಂಚನೆ -ಆರೋಪಿಗೆ 10 ವರ್ಷ ಜೈಲು ಶಿಕ್ಷೆ
ಕುಂದಾಪುರ: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಮದುವೆಗೆ ನಿರಾಕರಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 60 ಸಾವಿರ ದಂಡ ವಿಧಿಸಿ ಕುಂದಾಪುರದ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಆರ್ಡಿ ಸಮೀಪದ ಕೊಂಜಾಡಿ ನಿವಾಸಿ ಪ್ರದೀಪ್ ನಾಯ್ಕ್ (36) ಪ್ರಕರಣದ ಆರೋಪಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದೋಷಿಯೆಂದು ಕುಂದಾಪುರದಲ್ಲಿರುವ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನರಹರಿ ಪ್ರಭಾಕರ್ ಮರಾಠೆ ಜ.28 ರಂದು ತೀರ್ಪು ನೀಡಿದ್ದರು. ಇಂದು ಆರೋಪಿಗೆ ಕಠಿಣ ಸಜೆ ನೀಡಿರುವ ನ್ಯಾಯಾಲಯ ಅತ್ಯಾಚಾರ ಪ್ರಕರಣಕ್ಕೆ ಐಪಿಸಿ ಕಲಂ 376 ರಂತೆ 10 ವರ್ಷ ಕಠಿಣ ಜೈಲು ಮತ್ತು 50 ಸಾವಿರ ದಂಡ, ಮನೆಗೆ ಅಕ್ರಮ ಪ್ರವೇಶ ಮಾಡಿದ್ದಕ್ಕೆ ಐಪಿಸಿ ಸೆಕ್ಷನ್ 448 ಹಾಗೂ ಮೋಸ (ಐಪಿಸಿ ಕಲಂ 417) ರಂತೆ ತಲಾ 1 ವರ್ಷ ಸಜೆ ಮತ್ತು ತಲಾ 5 ಸಾವಿರ ದಂಡ ವಿಧಿಸಲಾಗಿದೆ. ಆರೋಪಿಯು ಈ ಶಿಕ್ಷೆಗಳನ್ನು ಏಕಕಾಲಕ್ಕೆ ಅನುಭವಿಸಬೇಕಿದೆ. ಇನ್ನು ದಂಡದ ಒಟ್ಟು 60 ಸಾವಿರ ಹಣದಲ್ಲಿ 50 ಸಾವಿರ ಮೊತ್ತವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಲು ನ್ಯಾಯಾಲಯ ಆದೇಶಿಸಿದೆ. ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ವಾದಿಸಿದ್ದರು. 2005 ರಲ್ಲಿ ಈ ಘಟನೆ ನಡೆದಿದ್ದು, ಯುವತಿಯ ಮನೆ ಗಾರೆ ಕೆಲಸಕ್ಕೆಂದು ಬಂದಿದ್ದ ಪ್ರದೀಪ ಯುವತಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಾನೆ. ಈ ನಡುವೆ ಯುವತಿಯನ್ನು ತನ್ನ ಬೈಕಿನಲ್ಲಿ ಧರ್ಮಸ್ಥಳ, ಸುಬ್ರಹ್ಮಣ್ಯ ಹಾಗೂ ಮುರ್ಡೇಶ್ವರ ಮೊದಲಾದೆಡೆ ಸುತ್ತಾಡಿಸಿದ್ದಾನೆ. ಮನೆಯಲ್ಲಿ ತಂದೆ ತಾಯಿ ಕೂಲಿ ಕೆಲಸಕ್ಕೆಂದು ಹೊರಗೆ ಹೋಗಿದ್ದ ಸಂದರ್ಭದಲ್ಲಿ ಪ್ರದೀಪ ಆಕೆಯೊಂದಿಗೆ ಸಲುಗೆಯಿಂದ ಮಾತನಾಡಿದ್ದು ಪ್ರೇಮ ನಿವೇಧನೆ ಮಾಡಿದ್ದ. ಬಳಿಕ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆ ಇಚ್ಚೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಬಳಿಕ ಯುವತಿ ಮದುವೆಯ ವಿಚಾರ ಪ್ರಸ್ತಾಪ ಮಾಡಿದಾಗ ತಂಗಿಯ ಮದುವೆಯ ನಂತರ ಮದುವೆಯಾಗುವುದಾಗಿ ನಂಬಿಸಿದ್ದಾನೆ. ಬಳಿಕ ಆರೋಪಿ ಓರ್ವ ಮೋಸಗಾರ ಎಂದು ತಿಳಿದಾಗ 2015ರಲ್ಲಿ ಯುವತಿ ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರುನೀಡಿದ್ದರು. ಆರೂಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆತನನ್ನು ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಕುಂದಾಪುರ ಸಿಪಿಐ ದಿವಾಕರ ಪಿಎಂ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸಂತ್ರಸ್ತ ಯುವತಿ ಹಾಗೂ ಆಕೆ ತಂದೆ-ತಾಯಿ ಸೇರಿ ಒಟ್ಟು 9 ಮಂದಿ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ್ದರು. ಸಂತ್ರಸ್ತೆ ನುಡಿದ ಸಾಕ್ಷ್ಯ ಹಾಗೂ ವೈದ್ಯಕೀಯ ವರದಿ ಸೇರಿದಂತೆ ಸುಧೀರ್ಘ ವಾದ ವಿವಾದ ಆಲಿಸಿದ ನ್ಯಾಯಾಲಯವು ಅಪರಾಧಿ ಎಂದು ತೀರ್ಪು ನೀಡಿದ್ದು ಶಿಕ್ಷೆ ಪ್ರಕಟಿಸಿದೆ. |