ಉಡುಪಿ: ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಯೋಗ ತರಬೇತಿ
ಉಡುಪಿ: ಸುಮಾರು 2500 ವರ್ಷಗಳ ಇತಿಹಾಸ ಹೊಂದಿರುವ ಯೋಗ ಇಂದು ಜಾಗತಿಕ ಮಟ್ಟದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ದೇಹ ಮತ್ತು ಮನಸ್ಸಿನ ಸಂಯೋಗವಾಗಿರುವ ಯೋಗ ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯಕ್ಕೂ ಉತ್ತಮ. ಈ ನಿಟ್ಟಿನಲ್ಲಿ ರಾಜ್ಯದೆಲ್ಲೆಡೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಯೋಗ ತರಬೇತಿ ನೀಡುವ ವಿನೂತನ ಹೆಜ್ಜೆಯೊಂದನ್ನು ಇಡಲಾಗಿದೆ. ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿರುವ ಕಾರಣ ಇದನ್ನು ನಿಯಂತ್ರಿಸಲು ಪ್ರತಿಯೊಬ್ಬರಿಗೂ ಸುಲಭವಾಗಿ ಯೋಗ ತರಬೇತಿ ಸಿಗಬೇಕಿದೆ. ಮಾನಸಿಕ ಒತ್ತಡ, ಹೃದಯ ಸಂಬಂಧಿ ಕಾಯಿಲೆ, ಖಿನ್ನತೆ ಗಳನ್ನು ಕಡಿಮೆ ಮಾಡಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅರೋಗ್ಯ ಮಿಷನ್ ಅಂಗವಾಗಿ ಆಯುಷ್ಮಾನ್ ಭಾರತದಡಿಯಲ್ಲಿ ಪಿಎಚ್ ಸಿ ಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಾಗಿ ಪರಿವರ್ತಿಸಲಾಗುತ್ತಿದೆ. ಇದರ ಒಂದು ಭಾಗವಾಗಿ ಉಚಿತ ಯೋಗ ತರಬೇತಿ ನೀಡಲಾಗುತ್ತಿದೆ. ಇದೀಗ ಉಡುಪಿ ಜಿಲ್ಲೆಯ ಕುಂದಾಪುರದ ಶಂಕರ ನಾರಾಯಣ, ಸಿದ್ದಾಪುರ ಸೇರಿದಂತೆ ಹಲವೆಡೆ ಈ ವಿನೂತನ ಪ್ರಯೋಗಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಯೋಜನೆಯ ಅಂಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಟ 20 ಶಿಬಿರಗಳನ್ನು ನಡೆಸಲಾಗುತ್ತದೆ. ಉಡುಪಿಯ ಸುಮಾರು 80 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 39 ಕಡೆ ಈ ಯೋಗ ತರಬೇತಿ ಆರಂಭಿಸಿದ್ದು 27 ಮಂದಿ ಶಿಕ್ಷಕರು ಯೋಗ ತರಬೇತಿ ನೀಡುತ್ತಿದ್ದಾರೆ. ಈ ಶಿಬಿರಗಳು ದಿನವೂ ಬೆಳಿಗ್ಗೆ ಮತ್ತು ಸಂಜೆ 1 ಗಂಟೆ ನಡೆಯುತ್ತದೆ. ಇನ್ನು ಈ ಶಿಬಿರದಲ್ಲಿ ಪರಿಣಿತರು ಯೋಗ ತರಬೇತಿ ನೀಡುತ್ತಿದ್ದಾರೆ. ಒಬ್ಬ ಯೋಗ ತರಬೇತುದಾರರಿಗೆ 2 ಕಡೆ ತರಬೇತಿ ನೀಡಲು ಅವಕಾಶ ಇದ್ದು, ತಲಾ 5000 ರೂಗಳಂತೆ ಗೌರವ ಧನ ಇರಲಿದೆ. |