ಕೃಷಿ ಕಾಯ್ದೆಗಳನ್ನು ವಿರೋಧಿಸಿ ಅಣ್ಣಾ ಹಝಾರೆ ನಾಳೆಯಿಂದ ಉಪವಾಸ ಸತ್ಯಾಗ್ರಹ
ಪುಣೆ: ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಈ ನಡುವೆ ರೈತರ ಪ್ರತಿಭಟನೆಗೆ ಹಿರಿಯ ಹೋರಾಟಗಾರ ಅಣ್ಣಾ ಹಝಾರೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ಅವರು ನಾಳೆಯಿಂದ ತಮ್ಮ ಹುಟ್ಟೂರಿನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ ಎಂದು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ. ತಮ್ಮ ಉಪವಾಸ ಸತ್ಯಾಗ್ರಹದ ಕುರಿತಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅಣ್ಣಾ ಹಝಾರೆ ಅವರು “ನಾನು ನನ್ನ ಹುಟ್ಟೂರು ರಲೇಗಾನ್ ಸಿದ್ದಿಯಲ್ಲಿರುವ ಯಾದವ್ ಬಾಬಾ ದೇವಸ್ಥಾನದಲ್ಲಿ ನಾಳೆ(ಜ.30)ಯಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದೇನೆ. ಕೋವಿಡ್ ಕಾರಣದಿಂದಾಗಿ ನನ್ನ ಬೆಂಬಲಿಗರು ಊರಿಗೆ ಬಾರದೇ, ನೀವಿರುವಲ್ಲಿಂದಲೇ ಬೆಂಬಲ ವ್ಯಕ್ತಪಡಿಸಿ ಎಂದು ಹೇಳಿದ್ದಾರೆ. ಇದರೊಂದಿಗೆ “ಕೇಂದ್ರ ಕೃಷಿ ಸಚಿವರಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾನು ಕಳೆದ ಮೂರು ತಿಂಗಳಿನಲ್ಲಿ 5 ಬಾರಿ ಕೃಷಿ ಕಾಯ್ದೆಯ ಕುರಿತಾದಂತೆ ಪತ್ರ ಬರೆದಿದ್ದೇನೆ. ಕೇಂದ್ರದ ಪರವಾಗಿ ಕೆಲವರು ಬಂದು ಮಾತುಕತೆ ನಡೆಸಿದ್ದರೂ ಕೂಡಾ ಯಾವುದೇ ಸಕಾರಾತ್ಮಕ ಫಲಿತಾಂಶ ಬಂದಿಲ್ಲ ಎಂದು ಅಣ್ಣಾ ಹಝಾರೆ ಅವರು ಹೇಳಿಕೆ ನೀಡಿದ್ದಾರೆ ಎಂದು ಪತ್ರಿಕೆ ಪ್ರಕಟಿಸಿದ ವರದಿ ತಿಳಿಸಿದೆ. ಈ ನಡುವೆ ಬಿಜೆಪಿಯ ಹಿರಿಯ ಮುಖಂಡ ಗಿರೀಶ್ ಮಹಾಜನ್ ರಲೇಗಾನ್ ಸಿದ್ದಿಯಲ್ಲಿರುವ ಹಝಾರೆ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅಣ್ಣಾ ಹಝಾರೆ ಅವರ ಬಳಿ ಉಪವಾಸ ಸತ್ಯಾಗ್ರಹ ಕೈಗೊಳ್ಳದಂತೆ ಮನವಿ ಮಾಡಲಾಗಿದೆ ಎಂದು ವರದಿಯಾಗಿದೆ. |
ಈ ಅಣ್ಣಾ ಹಜಾರೆ ಗೆ ಬೇರೇನೂ ಕೆಲಸವಿಲ್ವಾ? ಆತನೂ ಈ ಕಳಂಕಿತ ರೈತರ ಪರವಾಗಿ ಸತ್ಯಾಗ್ರಹ ನಡೆಸುವುದು ಎಷ್ಟು ಸರಿ? ಈತನನ್ನು ಒಬ್ಬ ಸಮಯಸಾಧಕ ನೆಂದು ನಂಬಬಹುದು.ಈತನ ಚಳುವಳಿಗಳೆಲ್ಲವೂ ಈಗಾಗಲೇ ಹಳಸಿಹೋಗಿವೆ. ಕಾಂಗ್ರೆಸ್ ಕೃಪಾಪೋಷಿತ ಸಂಘಟನೆಯ ಹರಿಕಾರನಾಗಿ ಈ ವ್ಯಕ್ತಿಯ ವರ್ತನೆ ಸರ್ವಥಾ ಖಂಡನೀಯ.