ಉಡುಪಿ: ಚಿತ್ರಕಲಾವಿದ ನೀರಿನಲ್ಲಿ ಮುಳುಗಿ ಮೃತ್ಯು
ಉಡುಪಿ: (ಉಡುಪಿ ಟೈಮ್ಸ್ ವರದಿ)ಅಪ್ರತಿಮ ಚಿತ್ರಕಾರ, ತನ್ನ ಕೈಚಳಕದಿಂದ ಬಿಡಿಸಿದ ಚಿತ್ರಕ್ಕೆ ಅದ್ಬುತ ಬಣ್ಣ ನೀಡಬಲ್ಲ ಮತ್ತು ತಾನೇ ರಚಿಸಿ ನಿರ್ದೇಶಿಸಿದ ಹಾಗೂ ನಾಟಕಗಳಲ್ಲಿ ಮಿಂಚಿದ್ದ ಕಲಾವಿದ ಉದ್ಯಾವರದ ಸಂಪಿಗೆ ನಗರದ ನಿವಾಸಿ ಆಸ್ಟಿನ್ ಮಚಾದೋ (42) ದಾರುಣ ಅಂತ್ಯ ಕಂಡ ದುರ್ದೈವಿ.
ಜನವರಿ 28ರಂದು ಉದ್ಯಾವರ ಸಂಪಿಗೆನಗರದ ಬಬ್ಬರ್ಯಗುಡ್ಡದ ನದಿಯಲ್ಲಿ ಮರುವಾಯಿ ಹೆಕ್ಕಲು ತೆರಳಿದ್ದ ಆಸ್ಟಿನ್ ನೀರಿನ ಸೆಳೆತಕ್ಕೆ ಮುಳುಗಿ ಸಾವನ್ನಪ್ಪಿದ್ದಾರೆ.
ಫ್ರೆಂಡ್ಸ್ ಗಾರ್ಡನ್ ಅರೂರುತೋಟ, ಸಿವೈಎ, ತುಳುವರ ಬಳಗ ಸಹಿತ ಹಲವು ಸಂಘ ಸಂಸ್ಥೆಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದ ಆಸ್ಟಿನ್ ಬಹುಮುಖ ಪ್ರತಿಭೆ.
ಪ್ರತಿವರ್ಷ ಎಂಬಂತೆ ಹದಿನೈದು ವರ್ಷಗಳ ಕಾಲ ಅಗಸ್ಟ್ 15 ರಂದು ಉಡುಪಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಕೂಟವನ್ನು ಉದ್ಯಾವರ ಪಂಚಾಯತ್ ಮೈದಾನದಲ್ಲಿ ಏರ್ಪಡಿಸಿದ್ದರು. ಕೊಂಕಣಿ, ಕನ್ನಡ ಸಹಿತ ಹಲವು ನಾಟಕಗಳನ್ನು ತಾನೇ ರಚಿಸಿ ಹಲವು ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ಅವಕಾಶ ನೀಡಿದ್ದರು. ಅದ್ಬುತ ಚಿತ್ರಕಾರರಾಗಿದ್ದ ಅಸ್ಟಿನ್, ತಾನೆ ಕೈಯಲ್ಲಿ ಬಿಡಿಸಿದ ಚಿತ್ರಗಳಿಗೆ ಬಣ್ಣ ನೀಡುವುದಲ್ಲದೆ ಪ್ರಮುಖ ಉದ್ಯಮಗಳ ಬ್ಯಾನರ್ ಗಳಿಗೆ ಕೂಡ ಬಣ್ಣವನ್ನು ನೀಡಿದ್ದರು.
ಶ್ರೀಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ಹುಲಿ ವೇಷ ಮತ್ತು ಇತರ ವೇಷಧಾರಿಗಳಿಗೆ ಬಣ್ಣವನ್ನು ನೀಡುತ್ತಿದ್ದ ಇವರು ಸೋಶಿಯಲ್ ಮಾಧ್ಯಮ ಬರುವ ಮೊದಲೇ ತನ್ನ ಕಲಾ ವೃತ್ತಿಯಿಂದ ಪ್ರಸಿದ್ಧಿಯಾಗಿದ್ದರು. ಖ್ಯಾತ ಕ್ರಿಕೆಟ್ ಪಟು, ನೃತ್ಯದಾರಿ ಮತ್ತು ತನ್ನದೇ ಕಲಾ ಆರ್ಟ್ಸ್ ಸಂಸ್ಥೆಯನ್ನು ನಡೆಸುತ್ತಿದ್ದ ಅಪ್ರತಿಮ ಕಲಾವಿದನೋರ್ವನ ಬದುಕು ದಾರುಣವಾಗಿ ಅಂತ್ಯಕಂಡಿದೆ.
ಮೃತರು ಪತ್ನಿ, ಪುತ್ರ, ಪುತ್ರಿ, ತಂದೆ ತಾಯಿ, ಸಹೋದರ ಸಹೋದರಿಯ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
May his soul Rest In Peace
RIP