ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರ: ವಾರ್ಷಿಕ ಮಹೋತ್ಸವಕ್ಕೆ ತೆರೆ
ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಸಂಪನ್ನಗೊಂಡಿದೆ. ಜನವರಿ 18ರಂದು ಆರಂಭಗೊಂಡ ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಹನ್ನೊಂದು ದಿನಗಳ ಕಾಲ ನಡೆದು ಗುರುವಾರ ಸಂಪನ್ನಗೊಂಡಿತು. ಹನ್ನೊಂದನೇ ಹಾಗೂ ಅಂತಿಮ ದಿನದಂದು ಭಕ್ತಾದಿಗಳು ಭಕ್ತಿಭರಿತವಾಗಿ ಬಲಿಪೂಜೆಗಳಲ್ಲಿ ಪಾಲ್ಗೊಂಡರು. ಭಕ್ತರು ಸಂತ ಲಾರೆನ್ಸರ ಪವಿತ್ರ ಅವಶೇಷವನ್ನು ವೀಕ್ಷಿಸಿ ಆಶೀರ್ವಚನವನ್ನು ಪಡೆದರು.
ಅಸ್ವಸ್ಥರಿಗಾಗಿ ಹಾಗೂ ವೃದ್ಧರಿಗಾಗಿ ವಿಶೇಷವಾಗಿ ಪ್ರಾರ್ಥಿಸಲಾಯಿತು. ಅಂತಿಮ ದಿನ ಹಬ್ಬದ ಸಂಭ್ರಮಿಕ ಗಾಯನ ಬಲಿಪೂಜೆಯನ್ನು ಮಂಗಳೂರಿನ ಧರ್ಮಾಧ್ಯಕ್ಷ ಪೀಟರ್ ಪಾವ್ಲ್ ಸಲ್ಡಾನ್ಹಾರವರು ನೆರವೇರಿಸಿ ಪ್ರಬೋಧನೆಯನ್ನು ನೀಡಿದರು. “ದೇವರ ಸ್ವರೂಪದಲ್ಲಿ ಹಾಗೂ ಹೋಲಿಕೆಯಲ್ಲಿ ಸೃಷ್ಟಿಯಾದ ಪ್ರತಿಯೊಬ್ಬ ವ್ಯಕ್ತಿಯನ್ನು ಸಹೋದರ ಸಹೋದರಿಯಾಗಿ ಕಂಡು, ಗೌರವ ನೀಡುವ ನಿರ್ಧಾರದೊಂದಿಗೆ ಈ ಹಬ್ಬವು ಸಮಾರೋಪಗೊಳ್ಳಲಿ” ಎಂದು ಅವರು ಭಕ್ತಾದಿಗಳಿಗೆ ಕಿವಿಮಾತನ್ನು ಹೇಳಿದರು.
ಬಲಿಪೂಜೆಯ ಆರಂಭದಲ್ಲಿ ಮಹೋತ್ಸವ ನಡೆಸಲು ಸಹಾಯಹಸ್ತವನ್ನು ನೀಡಿದ ಎಲ್ಲರನ್ನು ಮೊಂಬತ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಬಸಿಲಿಕದ ಪ್ರಧಾನ ಗುರು ಫಾದರ್ ಜಾರ್ಜ್ ಡಿಸೋಜಾ ವಂದನಾರ್ಪಣೆಗೈದರು. ಸಹಾಯಕ ಗುರು ಫಾದರ್ ರೊಯ್ ಮೆಲ್ವಿಲ್ ಲೋಬೊ ಹಾಗೂ ಇತರ ಗುರುಗಳು ಧರ್ಮಾದ್ಯಕ್ಷರೊಡನೆ ಬಲಿಪೂಜೆಯಲ್ಲಿ ಪಾಲ್ಗೊಂಡರು. ಪುಣ್ಯಕ್ಷೇತ್ರದ ಪಾಲನಾ ಮಂಡಳಿಯ ಉಪಾಧ್ಯಕ್ಷ ಶ್ರೀ ಸಂತೋಷ್ ಡಿಸಿಲ್ವ ಹಾಗೂ ಕಾರ್ಯದರ್ಶಿ ಶ್ರೀಮತಿ ಬೆನೆಡಿಕ್ಟ ಸಹಕರಿಸಿದರು.
ದಿನದ ಇತರ ಬಲಿಪೂಜೆಗಳನ್ನು ಕೋಟೇಶ್ವರದ ಫಾದರ್ ಆಲ್ವಿನ್ ಸಿಕ್ವೇರಾ, ಉದ್ಯಾವರದ ಫಾದರ್ ಸ್ಟಾನಿ ಲೋಬೊ ಹಾಗೂ ಮಂಗಳೂರು ಸಂತ ಜೊಸೆಫ್ಸ್ ಗುರುಮಠದ ರೆಕ್ಟರ್ ಫಾದರ್ ರೊನಾಲ್ಡ್ ಸೆರಾವೊರವರು ನೆರವೇರಿಸಿದರು. ದಿನದ ಏಕೈಕ ಕನ್ನಡ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾದರ್ ಚೇತನ್ ಲೋಬೊರವರು ನೆರವೇರಿಸಿದರು.
ಮಹೋತ್ಸವದ ಹನ್ನೊಂದು ದಿನಗಳಲ್ಲಿ ಐವತ್ತೈದು ಬಲಿಪೂಜೆಗಳು ನೆರವೇರಿದವು. ಇವುಗಳಲ್ಲಿ ವಿವಿಧ ಧರ್ಮಾಧ್ಯಕ್ಷರು ನೆರವೇರಿಸಿದ ಐದು ವಿಶೇಷ ಬಲಿಪೂಜೆಗಳೂ ಸೇರಿದ್ದವು. ಅಂತಿಮ ಐದು ದಿನಗಳಲ್ಲಿ ಕನ್ನಡ ಭಾಷೆಯಲ್ಲೂ ಬಲಿಪೂಜೆಗಳು ನಡೆದವು. ಸದ್ದು ಗದ್ದಲ, ಜಾತ್ರೆ-ಸಂತೆಗಳಿಲ್ಲದೆ ಶಾಂತ ವಾತಾವರಣದಲ್ಲಿ ನಡೆದ ಹಬ್ಬದ ನಂತರ ಬಹುತೇಕ ಭಕ್ತರು ಅತ್ತೂರು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ್ದು ಸಂತರಿಗಾಗಿ, ಸಂತೆಗಾಗಿ ಅಲ್ಲ ಎನ್ನುವುದು ಸಾಬೀತಾಯಿತು.