ಸುದ್ದಿವಾಹಿನಿಗಳಿಂದ ಗಲಭೆ ಸೃಷ್ಟಿಯ ಆತಂಕ: ಸುಪ್ರೀಂ ಆತಂಕ

ನವದೆಹಲಿ: ಪ್ರಚೋದನಕಾರಿ ಸುದ್ದಿಗಳ ಮೇಲೆ ನಿಯಂತ್ರಣವಿರಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ. ಪ್ರಚೋದನೆ ನೀಡುವಂತಹ ಸುದ್ದಿ ನಿರೂಪಣೆ ಮತ್ತು ಟಿವಿ ಕಾರ್ಯಕ್ರಮಗಳನ್ನು ನಿಯಂತ್ರಿಸಲು ಯಾವುದೇ ಕ್ರಮ ತೆಗೆದುಕೊಂಡಿಲ್ಲವೆಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ದೆಹಲಿಯಲ್ಲಿ ನಡೆದಿದ್ದ ತಬ್ಲೀಗ್‌ ಜಮಾತ್‌ನ ಸಭೆಯ ಕುರಿತು ಪ್ರಸಾರವಾಗಿದ್ದ ವರದಿಗಳ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಹೀಗೆ ಹೇಳಿದೆ. ‘ಕಾನೂನು ಸುವ್ಯವಸ್ಥೆ ಕಾಪಾಡಲು ಕೆಲವು ನಿಯಂತ್ರಕ ಕ್ರಮಗಳನ್ನು ತೆಗೆದು
ಕೊಳ್ಳುವುದು ಎಷ್ಟು ಮುಖ್ಯವೋ, ಸುದ್ದಿಗಳ ಮೇಲೂ ಅಂತಹ ನಿಯಂತ್ರಣದ ಅಗತ್ಯವಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ಅವರ ನೇತೃತ್ವದ ತ್ರಿಸದಸ್ಯ ಪೀಠವು ಹೇಳಿದೆ.

ಜನವರಿ 26ರಂದು ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್‌ ರ್‍ಯಾಲಿ‌ ವೇಳೆ ನಡೆದ ಹಿಂಸಾಚಾರ ಮತ್ತು ಅದನ್ನು ತಡೆಯಲು ಸರ್ಕಾರ ತೆಗೆದುಕೊಂಡ ಕ್ರಮವನ್ನು ಈ ಅರ್ಜಿಗಳ ವಿಚಾರಣೆ ವೇಳೆ ಪೀಠವು ಪ್ರಸ್ತಾಪಿಸಿತು.

‘ರೈತರ ಟ್ರ್ಯಾಕ್ಟರ್ ರ್‍ಯಾಲಿ ವೇಳೆ ಹಿಂಸಾಚಾರವನ್ನು ತಡೆಯಲು ಇಂಟರ್‌ನೆಟ್ ಸ್ಥಗಿತಗೊಳಿಸಲಾಗುತ್ತದೆ. ಆದರೆ, ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು, ಪ್ರಚೋದನಕಾರಿ ಸುದ್ದಿಗಳು ವರದಿಯಾಗಿವೆ. ಇದನ್ನು ನಿಯಂತ್ರಿಸಲು ಸರ್ಕಾರ ಏನನ್ನೂ ಮಾಡಿಲ್ಲ’ ಎಂದು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರಿದ್ದ ಪೀಠವು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಿದ್ದರು.

‘ರೈತರು ದೆಹಲಿಗೆ ‘ಭೇಟಿ’ ನೀಡಿದ ಸಂದರ್ಭದಲ್ಲಿ ನೀವು (ಸರ್ಕಾರ) ಇಂಟರ್‌ನೆಟ್ ಅನ್ನು ಸ್ಥಗಿತಗೊಳಿಸುತ್ತೀರಿ’ ಎಂದು ಪೀಠವು ಹೇಳಿತು. ‘ಭೇಟಿ’ ಎಂಬ ಪದ ಬಳಸಿದ್ದಕ್ಕೆ ತುಷಾರ್ ಮೆಹ್ತಾ ಅವರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ಅವರು, ‘ವಿವಾದಕ್ಕೆ ಕಾರಣವಾಗದಂತಹ ಪದ ಬಳಸುತ್ತಿದ್ದೇನೆ. ನೀವು ಮೊಬೈಲ್ ಇಂಟರ್‌ನೆಟ್‌ ಸ್ಥಗಿತಗೊಳಿಸುತ್ತೀರಿ. ಇಂತಹ ಸಮಸ್ಯೆಗಳು ಎಲ್ಲಿ ಬೇಕಿದ್ದರೂ ತಲೆದೋರಬಹುದು’ ಎಂದು ಹೇಳಿದರು.

‘ಸುದ್ದಿಯಿಂದ ಗಲಭೆ ಸೃಷ್ಟಿಯ ಆತಂಕ’

‘ಸತ್ಯ ಮತ್ತು ನ್ಯಾಯಯುತವಾದ ವರದಿಗಾರಿಕೆ ಸಾಮಾನ್ಯವಾಗಿ ಸಮಸ್ಯೆ ಅಲ್ಲ. ಆದರೆ, ಇತರರು ಆಕ್ರೋಶಗೊಳ್ಳಲು ವರದಿಗಾರಿಕೆಯನ್ನು ಬಳಸುವುದು ಸಮಸ್ಯೆ. ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿ ಮಾಡುವುದನ್ನು ತಡೆಯಲು ಕೆಲವು ಕ್ರಮಗಳು ಅನಿವಾರ್ಯ. ಈ ವಿಚಾರದಲ್ಲಿ ಸರ್ಕಾರ ಏಕೆ ಕುರುಡು ಅರ್ಥವಾಗುವುದಿಲ್ಲ. ಸರ್ಕಾರವನ್ನು ದೂರಬೇಕು ಎಂದಲ್ಲ. ಆದರೆ, ಸರ್ಕಾರ ಏನನ್ನೂ ಮಾಡದಿರುವುದು ಏಕೆ’ ಎಂದು ಬೊಬಡೆ ಪ್ರಶ್ನಿಸಿದ್ದಾರೆ. 

ಸುದ್ದಿ ವಾಹಿನಿಗಳಲ್ಲಿನ ಸುದ್ದಿ ಪ್ರಸಾರವು ಗಲಭೆಗೆ ಕುಮ್ಮಕ್ಕು ನೀಡಬಹುದು. ಅದರಿಂದಾಗಿ ಜೀವ ಹಾನಿ ಆಗಬಹುದು. ಈಗಿನ ದಿನಗಳಲ್ಲಿ ಜನರು ಏನು ಬೇಕಿದ್ದರೂ ಹೇಳುತ್ತಾರೆ. ಅದು ಸೃಷ್ಟಿಸುವ ಪರಿಸ್ಥಿತಿಯು ಜೀವ ಮತ್ತು ಆಸ್ತಿಯನ್ನು ನಾಶ ಮಾಡಬಹುದು’ ಎಂದು ಪೀಠವು ಕಳವಳ ವ್ಯಕ್ತಪಡಿಸಿತು. 

Leave a Reply

Your email address will not be published. Required fields are marked *

error: Content is protected !!