ಉಡುಪಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ‘ವಿಷನ್ ಪ್ಲಾನ್ 2021-31’ ಕರುಡು ಪ್ರತಿ ಸಿದ್ಧ: ಎಸ್. ಅಂಗಾರ
ಉಡುಪಿ: ಜಿಲ್ಲೆಯ ಅಜ್ಜರಕಾಡುವಿನ ಜಿಲ್ಲಾ ಕ್ರೀಡಾಂಗಣದಲ್ಲಿ 72ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಅವರು ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಬ್ರಿಟಿಷರ ಸಂಕೋಲೆಯಿಂದ ಭಾರತ ಸ್ವತಂತ್ರವಾಗಿ ಗಣರಾಜ್ಯವಾದ ಬಗೆಯ ಕುರಿತು ಮಾಹಿತಿ ನೀಡಿದರು. ಇದರೊಂದಿಗೆ ವಿಶ್ವಕ್ಕೆ ಮಾದರಿ ಸ್ವರೂಪದ ಇಂತಹದ್ದೊಂದು ದೊಡ್ಡ ಲಿಖಿತ ಸಂವಿಧಾನವನ್ನು ದೇಶಕ್ಕೆ ನೀಡುರುವ ಡಾ. ಬಾಬಾ ಸಹೇಬ್ ಅಂಬೆಡ್ಕರ್ ಅವರನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡು ಗೌರವ ಸೂಚಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸಂವಿಧಾನ ಎಂಬುದು ಭಾರತದ ಎಲ್ಲಾ ನಾಗರಿಕರು ಅನುಸರಿಸಬೇಕಾದ ಮೂಲ ಭೂತ ನಿಯಮ ಮತ್ತು ಹಕ್ಕುಗಳ ಸ್ಥಾಪನೆಗೆ ರಚಿಸಲಾದ ಕಾಯ್ದೆಯಾಗಿದೆ.
ಈ ನಿಟ್ಟಿನಲ್ಲಿ ಸಂವಿಧಾನದಲ್ಲಿ ನೀಡಲಾದ ಪರಮಾಧಿಕಾರವನ್ನು ನಾವು ವಿವೇಚನೆಯಿಂದ ಬಳಸಿಕೊಳ್ಳಬೇಕು ಹಾಗೂ ಉಳಿಸಿಕೊಳ್ಳಬೇಕು. ಆಗ ಮಾತ್ರ ನಮ್ಮ ಪ್ರಜಾ ಪ್ರಭುತ್ವಕ್ಕೆ ಗಣರಾಜ್ಯ ದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ. ಈ ದಿಶೆಯಲ್ಲಿ ಸಂವಿಧಾನದ ಅಶೋತ್ತರಗಳನ್ನು ಸಾಧಿಸುತ್ತೇವೆಂಬ ಸಕಾರಾತ್ಮಕ ಆಶಾ ಭಾವನೆಯೊಂದಿಗೆ ಮುನ್ನಡೆಯೋಣ ಎಂದು ಸಲಹೆ ನೀಡಿದರು.
ಈ ವೇಳೆ ಜಿಲ್ಲೆಯ ಅಭಿವೃದ್ಧಿ ಹಾಗೂ ಜಿಲ್ಲೆಯ ಪ್ರವಾಸೋಧ್ಯಮದ ಅಭಿವೃದ್ಧಿ ಕುರಿತು ಮಾಹಿತಿ ನೀಡಿದ ಅವರು, ಉಡುಪಿ ಜಿಲ್ಲೆಯನ್ನು ಪ್ರವಾಸೋದ್ಯಮದ ಬಹು ಮುಖ್ಯ ಕ್ಷೇತ್ರವನ್ನಾಗಿ ರೂಪಿಸಲು ಜಿಲ್ಲೆಯ ಸಮಗ್ರ ಪ್ರವಾಸಿ ತಾಣಗಳ ಅಭಿವೃದ್ಧಿಗೆ ವಿಷನ್ ಪ್ಲಾನ್ 2021-31 ಕರುಡು ಪ್ರತಿ ಸಿದ್ಧ ಪಡಿಸಲಾಗುತ್ತಿದ್ದು, ಪ್ರವಸೋದ್ಯಮ ನಿರ್ದೇಶನಾಲಯಕ್ಕೆ ಸರ್ಕಾರ ಸಲ್ಲಿಸುವ ಆರಂಭಿಕ ಕರುಡು ಪ್ರಸ್ತಾವಣೆಯನ್ನು ತಯಾರಿಸಲು ಕ್ರಮ ವಹಿಸಲಾಗಿದೆ.
ಇದರಿಂದ ಒಂದೇ ನೀಲಿ ನಕ್ಷೆಯಡಿಯಲ್ಲಿ 10 ವರ್ಷಗಳಲ್ಲಿ ಜಿಲ್ಲೆಯಲ್ಲಿ ಕೈಗೊಳ್ಳಬಹುದಾದ ಯೋಜನೆಗಳನ್ನು ಅಡಕಗೊಳಸಲಾಗುವುದು. ಜಿಲ್ಲೆಯ ಪ್ರತಿಯೊಂದು ಸ್ಥಳವು ಪ್ರವಾಸೋಧ್ಯಮ ಅಭಿವೃದ್ಧಿಗೆ ಪೂರಕವಾಗಿದೆ. ಈ ನಿಟ್ಟಿನಲ್ಲಿ ಒಟ್ಟು 104 ಪ್ರವಾಸಿ ತಾಣಗಳನ್ನು ಗುರುತಿಸಿದೆ. 2021-25 ನೇ ಪ್ರವಾಸೋಧ್ಯಮ ನೀತಿಯಲ್ಲಿ ಕರ್ನಾಟಕ ಸರಕಾರವು ಉಡುಪಿ ಜಿಲ್ಲೆಯನ್ನು ಆದ್ಯತಾ ಪ್ರವಾಸಿ ತಾಣಗಳ ಜಿಲ್ಲೆ ಎಂದು ಗುರುತಿಸಿದ್ದು ಇದು ಜಿಲ್ಲೆಯ ಪ್ರವಾಸೋಧ್ಯಮ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಕೆ. ರಘುಪತಿ ಭಟ್, ಜಿಲ್ಲಾಧಿಕಾರಿ ಜಿ. ಜಗದೀಶ್, ಅಪರ ಜಿಲ್ಲಾದಿಕಾರಿ ಸದಾಶಿವ ಪ್ರಭು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಟ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರ ಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ತಾಲೂಕು ಪಂಚಾಯತ್ ಅಧ್ಯಕ್ಷೆ ಸಂಧ್ಯಾ ಕಾಮತ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್ ವಿಷ್ಣು ವರ್ಧನ್ ಮೊದಲಾದವರು ಉಪಸ್ಥಿತರಿದ್ದರು.