ಉಡುಪಿ: ದೈವಸ್ಥಾನ ಮುಂಭಾಗ ಮಾಂಸ ತ್ಯಾಜ್ಯ – ಸ್ಥಳೀಯರ ಆಕ್ರೋಶ

ಉಡುಪಿ: ನಗರದ ಬೀಡಿನ ಗುಡ್ಡೆಯ ಪರಿಸರದಲ್ಲಿರುವ ಪಿಲ್ಚಂಡಿ ದೈವದ ಗುಡಿಯ ಮುಂಭಾಗದಲ್ಲೇ ಮಾಂಸದ ತ್ಯಾಜ್ಯ ಸಂಗ್ರಹಣೆಯಾಗುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ನಗರಸಭೆಗೆ ಸಂಬಂಧಿಸಿದ ಕೋಳಿ ಮಾಂಸ ಹಾಗೂ ಇತರೆ ಮಾಂಸದ ತ್ಯಾಜ್ಯ ಸಂಗ್ರಹದ ಮಿನಿ ಲಾರಿಯನ್ನು ಈ ಗುಡಿಯ ಮುಂಭಾಗದಲ್ಲೇ ನಿಲ್ಲಿಸಲಾಗುತ್ತದೆ. ನಗರದ ಮಾಂಸದ ಅಂಗಡಿಗಳ ತ್ಯಾಜ್ಯಗಳನ್ನು ಸಣ್ಣ ವಾಹನಗಳಲ್ಲಿ ತಂದು ಈ ಮಿನಿ ಲಾರಿಗೆ ಸುರಿಯಲಾಗುತ್ತಿದೆ, ಅಲ್ಲದೆ ರಾತ್ರಿ ಹೊತ್ತು ನಗರದ ಹೊರವಲಯದ ಕೊಳೆತ ಮಾಂಸದ ತ್ಯಾಜ್ಯಗಳನ್ನು ಕದ್ದು ಮುಚ್ಚಿ ತಂದು ಈ ಲಾರಿಯಲ್ಲೇ ಸಂಗ್ರಹಿಸಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಈ ಮಿನಿ ಲಾರಿ ದಿನವಿಡೀ ದೇವಸ್ಥಾನದ ಮುಂಬಾಗದಲ್ಲಿ ಇರುತ್ತದೆ ಸಂಜೆ ವೇಳೆ ತ್ಯಾಜ್ಯ ಲಾರಿ ತುಂಬಿದ ಬಳಿಕ ಅದನ್ನು ಬೇರೆಡೆ ಖಾಲಿ ಮಾಡಿ ಮತ್ತೇ ಗುಡಿಯ ಮುಂಭಾಗದಲ್ಲೇ ತಂದು ನಿಲ್ಲಿಸಲಾಗುತ್ತದೆ. ಇನ್ನು ದಿನವಿಡೀ ಈ ಪರಿಸರದಲ್ಲಿ ಈ ತ್ಯಾಜ್ಯ ತುಂಬಿದ ಲಾರಿ ಇರುವುದರಿಂದ ಲಾರಿಯಲ್ಲಿರುವ ಕೋಳಿಗಳ ರುಂಡ, ಕರುಳು, ಕುರಿ ಮಾಂಸಗಳ ತ್ಯಾಜ್ಯಗಳನ್ನು ಕಾಗೆಗಳು, ನಾಯಿಗಳು ತ್ಯಾಜ್ಯವನ್ನು ಸುತ್ತಮುತ್ತಲೆಲ್ಲಾ ಎಳೆದೊಯ್ಯುತ್ತಿರುವುದರಿಂದ  ಪರಿಸರ ದುರ್ನಾತ ಬೀರುತ್ತಿದೆ.

ಇದದಿಂದ ಸಾರ್ವಜನಿಕರಿಗೆ ನಡೆದಾಡಲು ಹಾಗೂ ಇಲ್ಲಿರುವ ಮೈದಾನದಲ್ಲಿ ಕ್ರೀಡಾಪಟುಗಳಿಗೆ ಆಟವಡಲು ಸಮಸ್ಯೆ ಉಂಟಾಗಿದ್ದು, ಈ ಭಾಗದಲ್ಲಿ ಮೂಗು ಮುಚ್ಚಿಕೊಂಡೇ ಇರಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.     ಇದರೊಂದಿಗೆ ಈ ಪರಿಸರದಲ್ಲಿ ಮಾಂಸದ ರಕ್ತಗಳು ಸಂಗ್ರಹವಾಗಿ ಕೊಳೆಯುತ್ತಿದ್ದು ಸಾಂಕ್ರಮಿಕ ರೋಗಗಳು ಹರಡುವ ಭೀತಿಯೂ ಎದುರಾಗಿದೆ. ಇನ್ನಾದರೂ ನಗರಾಡಳಿತ ಎಚ್ಚೆತ್ತುಕೊಂಡು ಪರಿಸರದ ಸ್ವಚ್ಛತೆಯನ್ನು ಕಾಪಾಡಬೇಕು, ಈ ಮಾಂಸದ ತ್ಯಾಜ್ಯ ಸಂಗ್ರಹ ದ ಲಾರಿಯನ್ನು ಈ ಪರಿಸರದಲ್ಲಿ ನಿಲ್ಲಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!