ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ – ಪರೀಕ್ಷೆ ಮುಂದೂಡಿಕೆ: ಆರು ಮಂದಿಯ ಬಂಧನ
ಬೆಂಗಳೂರು: ನಾಳೆ ನಡೆಯಬೇಕಿದ್ದ ಕರ್ನಾಟಕ ಲೋಕಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕ ಪರೀಕ್ಷೆಗಳ ಸೋರಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ.
ರಾಜ್ಯದಾದ್ಯಂತ ನಾಳೆ ಅಂದರೆ ಜನವರಿ 24 ನಡೆಯಬೇಕಿದ್ದ ಎಫ್‌ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಸಂಗತಿಯನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದು, ಈ ಸಂಬಂಧ ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ರಾಚಪ್ಪ, ಚಂದ್ರ ಎಂಬುವವರ ಮಾಹಿತಿ ಪತ್ತೆಯಾಗಿದ್ದು, ಉಳಿದ ನಾಲ್ವರ ಹೆಸರು ಗೊತ್ತಾಗಿಲ್ಲ. ಬಂಧಿತರಿಂದ ಪ್ರಶ್ನೆಪತ್ರಿಕೆಗಳು ಹಾಗೂ 24 ಲಕ್ಷ ರೂ ನಗದನ್ನು ಜಪ್ತಿ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ್ ಅವರು, ‘ಕರ್ನಾಟಕ ಲೋಕಸೇವಾ ಆಯೋಗದಿಂದ (ಕೆಪಿಎಸ್‌ಸಿ) ನಡೆಯಬೇಕಿದ್ದ ಎಫ್‌ಡಿಎ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಬಗ್ಗೆ ಮಾಹಿತಿ ಬಂದಿತ್ತು. ವಿಶೇಷ ತಂಡವೊಂದನ್ನು ರಚಿಸಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಶ್ನೆಪತ್ರಿಕೆ ಹಂಚಲು ಬಳಕೆ ಮಾಡುತ್ತಿದ್ದ ಮೂರು ವಾಹನಗಳನ್ನೂ ಜಪ್ತಿ ಮಾಡಲಾಗಿದೆ. ಸೋರಿಕೆ ಸಂಗತಿಯನ್ನು ಕೆಪಿಎಸ್‌ಸಿ ಅಧಿಕಾರಿಗಳಿಗೂ ತಿಳಿಸಲಾಗಿದೆ. ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು. ಸೋರಿಕೆ ಎಲ್ಲಿಂದ ಆಯಿತು ಎಂಬುದು ಇನ್ನಷ್ಟೇ ತಿಳಿಯಬೇಕಿದೆ ಎಂದೂ ತಿಳಿಸಿದರು.
ಎಫ್‌ಡಿಎ ಪರೀಕ್ಷೆ ಮುಂದೂಡಿಕೆ
ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಮಾಹಿತಿ ಪಡೆದ ಬೆನ್ನಲ್ಲೇ ಕೆಪಿಎಸ್ ಸಿ ನಾಳೆ (.ಜ. 24) ನಡೆಯಬೇಕಿದ್ದ ಎಫ್‌ಡಿಎ ಪರೀಕ್ಷೆಯನ್ನು ಮುಂದೂಡಿದೆ. ಈ ಬಗ್ಗೆ ಮಾಹಿತಿ ನೀಡಿದ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಾರ್ಯದರ್ಶಿ ಜಿ. ಸತ್ಯವತಿ ಅವರು, ‘2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗಳ ನೇಮಕಾತಿಗಾಗಿ ಜ. 24 ಹಾಗೂ ಜ. 25ರಂದು ಪರೀಕ್ಷೆ ನಡೆಯಬೇಕಿತ್ತು. ಆದರೆ, ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ದುಷ್ಕರ್ಮಿಗಳ ಕೈಗೆ ಸಿಕ್ಕಿರುವುದು ಮೂಲಗಳಿಂದ ಗೊತ್ತಾಗಿದೆ. ಅದೇ ಕಾರಣಕ್ಕೆ ಪರೀಕ್ಷೆಯನ್ನು ಮುಂದೂಡಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕವನ್ನು ಮರು ನಿಗದಿಪಡಿಸಲಾಗುವುದು. ಆ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು’ ಎಂದೂ ಹೇಳಿದ್ದಾರೆ.