ಮೇ 31ರವರೆಗೆ 4ನೇ ಹಂತದ ಲಾಕ್‌ಡೌನ್ ಮುಂದುವರಿಕೆ: ನಾಳೆಯಿಂದ ಬಸ್ ಸಂಚಾರ

ಬೆಂಗಳೂರು: ರಾಜ್ಯದಲ್ಲಿ ಮೇ 19 ರಿಂದ ಕೆಂಪು ವಲಯ ಮತ್ತು ಕಂಟೇನ್ಮೆಂಟ್ ಜೋನ್ ಹೊರತುಪಡಿಸಿ ಉಳಿದೆಡೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಸಂಚಾರ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಬಸ್‌ಗಳಲ್ಲಿ ಕೇವಲ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುವುದು. ಖಾಸಗಿ ಬಸ್ ಸಂಚಾರಕ್ಕೂ ಅನುಮತಿ ಇದೆ. ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚಿಸಿದರು.

ಆಟೊ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಓಡಾಟಕ್ಕೂ ಅವಕಾಶ ನೀಡಲಾಗಿದೆ. ಆಟೊ ಮತ್ತು ಟ್ಯಾಕ್ಸಿಯಲ್ಲಿ ಚಾಲಕ ಸೇರಿ ಇಬ್ಬರು ಪ್ರಯಾಣಿಕರು, ಮ್ಯಾಕ್ಸಿಕ್ಯಾಬ್‌ನಲ್ಲಿ ಚಾಲಕ ಸೇರಿ ಮೂವರು ಪ್ರಯಾಣಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಮೇ 31ರವರೆಗೆ 4ನೇ ಹಂತದ ಲಾಕ್‌ಡೌನ್ ಮುಂದುವರಿಯಲಿದೆ. ಕಂಟೇನ್ಮೆಂಟ್ ವಲಯಗಳಲ್ಲಿ ಬಿಗಿ ಭಧ್ರತೆ ಕಲ್ಪಿಸಲಾಗುವುದು. ಕಾನೂನು ಬಾಹಿರ ವರ್ತನೆಯನ್ನು ಸಹಿಸಲು ಆಗುವುದಿಲ್ಲ. ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.  ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ. ಜನರ ಓಡಾಟಕ್ಕೆ ಅನುಕೂಲ ಇರಬೇಕು ಎಂದು ಸಂಪುಟ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳು ಅಭಿಪ್ರಾಯಪಟ್ಟರು.

ಬಿಎಂಟಿಸಿ, ಕೆಎಸ್ಆರ್‌ಟಿಸಿ, ಈಶಾನ್ಯ ಕರ್ನಾಟಕ ಸಾರಿಗೆ ನಿಗಮ ಮತ್ತು ನೈಋತ್ಯ ಕರ್ನಾಟಕ ಸಾರಿಗೆ ನಿಗಮದ ಬಸ್‌ಗಳೂ ಸಂಚರಿಸಲಿವೆ ಎಂದರು. ಹೊರ ರಾಜ್ಯಗಳಿಂದ ಬರುವವರಿಗಾಗಿ ಹಂತಹಂತವಾಗಿ ಬಸ್‌ ವ್ಯವಸ್ಥೆ ಮಾಡಲಾಗುವುದು. ಇತರ ರಾಜ್ಯಗಳಿಂದ ಬಂದವರಿಗಾಗಿ ಸಾಮೂಹಿಕ ಕ್ವಾರಂಟೈನ್ ಮಾಡಲು ತೀರ್ಮಾನಿಸಲಾಗಿದೆ. ಅನಿವಾರ್ಯ ಕಾರಣಗಳಿದ್ದರೆ ಮಾತ್ರ ಇತರ ರಾಜ್ಯಗಳಿಂದ ಬರುವವರಿಗೆ ಅವಕಾಶ ನೀಡಲಾಗುವುದು. ಸರ್ಕಾರಿ ಬಸ್‌ಗಳಿಗೆ ಅನ್ವಯಿಸುವ ಎಲ್ಲ ನಿಯಮಗಳೂ ಖಾಸಗಿ ಬಸ್‌ಗಳಿಗೂ ಅನ್ವಯಿಸುತ್ತವೆ. ನಿಯಮ ಪಾಲಿಸದಿದ್ದರೆ ಅಧಿಕಾರಿಗಳು ದಂಡ ಹಾಕುತ್ತಾರೆ ಎಂದು ಮಾಹಿತಿ ನೀಡಿದರು.

ನಾಳೆಯಿಂದ ಮಾಲ್, ಸಿನಿಮಾ, ಹೋಟೆಲ್ ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿಗಳ್ನು ತೆರೆಯಲು ಅವಕಾಶವಿದೆ. ರಾಜ್ಯದೊಳಗೆ ರೈಲುಗಳ ಸಂಚಾರಕ್ಕೂ ಅವಕಾಶ ನೀಡಲಾಗಿದೆ. ಹೊರ ರಾಜ್ಯಗಳಿಂದ ರೈಲುಗಳು ಬರುವುದಿಲ್ಲ ಎಂದು ವಿವರಿಸಿದರು.

ಆಟೊ ಮತ್ತು ಟ್ಯಾಕ್ಸಿಗಳಲ್ಲಿ ಚಾಲಕರನ್ನು ಹೊರತುಪಡಿಸಿ ಇಬ್ಬರಿಗೆ ಅವಕಾಶವಿದೆ. ಮ್ಯಾಕ್ಸಿ ಕ್ಯಾಬ್‌ಗಳಲ್ಲಿ ಚಾಲಕರನ್ನು ಹೊರತುಪಡಿಸಿ ಮೂವರಿಗೆ ಅವಕಾಶವಿದೆ. ಕ್ಷೌರದ ಅಂಗಡಿಗಳನ್ನೂ ನಾಳೆಯಿಂದ ತೆರೆಯಬಹುದು. ಇನ್ನು ಮುಂದೆ ಪ್ರತಿ ಭಾನುವಾರ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಇರುತ್ತದೆ ಎಂದು ಹೇಳಿದರು.

ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರದೇಶವನ್ನು ಕಂಟೇನ್ಮೆಂಟ್ ಝೋನ್ ಎಂದು ಪರಿಗಣಿಸಲಾಗುವುದು. ಅಂಥ ಸ್ಥಳಗಳನ್ನು ಹೊರತುಪಡಿಸಿ ಉಳಿದೆಡೆ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶವಿದೆ ಎಂದು ಸ್ಪಷ್ಟಪಡಿಸಿದರು.

ಸಾರಿಗೆ ನಿಗಮಗಳ ಬಸ್‌ಗಳ ಟಿಕೆಟ್ ದರವನ್ನು ಸದ್ಯಕ್ಕೆ ಹೆಚ್ಚಿಸುವುದಿಲ್ಲ. ನಿಗಮಗಳಿಗೆ ಆಗುವ ನಷ್ಟವನ್ನು ಸರ್ಕಾರವೇ ಭರಿಸಲಿದೆ. ಹೊಟೆಲ್‌ಗಳಲ್ಲಿ ಪಾರ್ಸೆಲ್ ಕೊಂಡೊಯ್ಯಲು ಅವಕಾಶವಿದೆ. ಬೀದಿಬದಿ ವ್ಯಾಪಾರಿಗಳಿಗೆ ಅಂಗಡಿ ತೆರೆಯಲು ಅವಕಾಶವಿದೆ. ಕ್ರೀಡಾ ಚಟುವಟಿಕೆಗಳಿಗೆ ಅವಕಾಶವಿದೆ. ಆದರೆ ಜಿಮ್ ತೆರೆಯಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.




Leave a Reply

Your email address will not be published. Required fields are marked *

error: Content is protected !!