ಕೋವಿಡ್ ಲಸಿಕೆ ತಯಾರಿಕೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಘಟಕದಲ್ಲಿ ಭಾರಿ ಅಗ್ನಿ ಅವಘಡ
ಪುಣೆ: ದೇಶದಲ್ಲಿ ಕೋವಿಡ್ ಲಸಿಕೆ ತಯಾರಿಕೆಯ ಹೊಣೆ ಹೊತ್ತಿರುವ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಪುಣೆಯ ಘಟಕದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ.
ಮಹಾರಾಷ್ಟ್ರದ ಪುಣೆಯಲ್ಲಿರುವ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಗೇಟ್ ನಂಬರ್ 1ರಲ್ಲಿ ಈ ಘಟನೆ ನಡೆದಿದ್ದು, ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಬೆಂಕಿ ಹೊತ್ತುಕೊಂಡಿದೆ. ಪ್ರಸ್ತುತ ಅಗ್ನಿಶಾಮಕದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಅಗ್ನಿ ಅವಘಡದಿಂದ ಲಸಿಕೆ ತಯಾರಿಕೆ ಮೇಲೆ ಪರಿಣಾಮವಿಲ್ಲ
ಇನ್ನು ಹಾಲಿ ಅಗ್ನಿ ಅವಘಡದಿಂದ ಲಸಿಕೆ ತಯಾರಿಕೆ ಮೇಲೆ ಯಾವುದೇ ರೀತಿಯ ಪರಿಣಾಮವಿಲ್ಲ ಎಂದು ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಮೂಲಗಳು ತಿಳಿಸಿವೆ. ಪ್ರಸ್ತುತ ಅಗ್ನಿ ಅವಘಡ ಸಂಭವಿಸಿರುವುದು ನಿರ್ಮಾಣ ಹಂತದ ಕಟ್ಟಡದಲ್ಲಿ. ಅಲ್ಲಿ ಲಸಿಕೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಕೆಲಸ ನಡೆಯುತ್ತಿರಲಿಲ್ಲ. ಹೀಗಾಗಿ ಲಸಿಕೆ ತಯಾರಿಕೆಯ ಮೇಲೆ ಅಗ್ನಿ ಅವಘಡದಿಂದ ಯಾವುದೇ ರೀತಿಯ ಪರಿಣಾಮವಾಗುವುದಿಲ್ಲ ಎಂದು ಸಂಸ್ಥೆ ಹೇಳಿದೆ.
ಇನ್ನು ಭಾರತದ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ಬ್ರಿಟನ್ ನ ಆಕ್ಸ್ ಫರ್ಡ್ ವಿವಿಯೊಂದಿಗಿನ ಸಹಭಾಗಿತ್ವದಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ತಯಾರಿಸುತ್ತಿದೆ. ಪುಣೆಯ ಮಂಜಾರಿ ಪ್ರದೇಶದಲ್ಲಿ ಸುಮಾರು 100 ಎಕರೆ ಪ್ರದೇಶದಲ್ಲಿ ಈ ಸಂಸ್ಥೆಯ ಘಟಕವಿದ್ದು, ಪ್ರಸ್ತುತ ಇದೇ ಘಟಕದಲ್ಲಿ ಕೋವಿ ಶೀಲ್ಡ್ ಲಸಿಕೆ ತಯಾರಿಸಲಾಗುತ್ತಿದೆ.
ಪ್ರಸ್ತುತ ಅಗ್ನಿ ಅವಘಡ ಸಂಭವಿಸಿರುವ ಕಟ್ಟಡಕ್ಕೂ ಲಸಿಕೆ ತಯಾರಾಗುವ ಕಾಂಪ್ಲೆಕ್ಸ್ ಗೂ ಸಾಕಷ್ಟು ದೂರವಿದ್ದು, ಇದರಿಂದ ಲಸಿಕೆ ತಯಾರಿಕೆ ಮೇಲೆ ಯಾವುದೇ ರೀತಿಯ ಪರಿಣಾಮವಿಲ್ಲ ಎಂದು ಹೇಳಲಾಗಿದೆ.