ಪದ್ಮಾಸನ ಭಂಗಿಯಲ್ಲಿ 1ಕಿ.ಮೀ ಈಜಿ ಹೊಸ ದಾಖಲೆ ಬರೆಯಲಿರುವ ಗಂಗಾಧರ ಕಡೆಕಾರ್
ಉಡುಪಿ: ನಿವೃತ್ ಆರ್ ಟಿ ಓ ಅಧಿಕಾರಿ ಗಂಗಾಧರ ಜಿ. ಕಡೆಕಾರ್ ಅವರು, ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿ ಬ್ರೆಸ್ಟ್ ಸ್ಟ್ರೋಕ್ ಶೈಲಿಯಲ್ಲಿ ಸಮುದ್ರದಲ್ಲಿ ಒಂದು ಕಿಲೋ ಮೀಟರ್ ಈಜಿ ಹೊಸ ದಾಖಲೆ ಬರೆಯಲಿದ್ದಾರೆ. ಈ ನೂತನ ದಾಖಲೆ ನಿರ್ಮಿಸುವ ಕಾರ್ಯಕ್ರಮ ಜ. 24 ರಂದು ಬೆಳಿಗ್ಗೆ 8 ಗಂಟೆಗೆ ಮಲ್ಪೆ ಪಡುಕೆರೆ ಕಡಲ ಕಿನಾರೆಯಲ್ಲಿ ನಡೆಯಲಿದೆ ಎಂದು ಮಾಜಿ ನಗರ ಸಭಾ ಸದಸ್ಯ ಪಾಂಡುರಂಗ ಮಲ್ಪೆ ಅವರು ಹೇಳಿದ್ದಾರೆ. ಈ ಕುರಿತು ಉಡುಪಿಯಲ್ಲಿ ಪತಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಈ ಸಾಹಸಮಯ ಕಾರ್ಯಕ್ರಮದ ತೀರ್ಪುಗಾರರಾಗಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನ ಪ್ರತಿನಿಧಿ ಹರೀಶ್ ಆರ್ ಭಾಗವಹಿಸಲಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಕೆ .ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷಕ ಚೇತನ್ ಆರ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಡುಪಿ. ದ.ಕ ಜಿಲ್ಲಾ ಮೀನು ಮಾರಟ ಮಹಾಮಂಡಲದ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಕಾರ್ತಿಕ್ ಗ್ರೂಪ್ ಆಫ್ ಮಲ್ಪೆ ಇದರ ಮ್ಯಾನೆಜಿಂಗ್ ಡೈರೆಕ್ಟರ್ ಹರಿಯಪ್ಪ ಕೋಟ್ಯಾನ್, ಪರ್ಸೀನ್ ಮೀನುಗಾರರ ಸಂಘ ಮಲ್ಪೆ ಇದರ ಅಧ್ಯಕ್ಷ ನಾಗರಾಜ್ ಸುವರ್ಣ, ಮತ್ಸ್ಯೋದ್ಯಮಿ ಮಲ್ಪೆ ಸುಧಾಕರ ಕುಂದರ್ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಈ ವೇಳೆ ಸುದ್ಧಿ ಗೋಷ್ಟಿಯಲ್ಲಿ ಜೈ ದುರ್ಗಾ ಸ್ವಿಮ್ಮಿಂಗ್ ಕ್ಲಬ್‌ನ ಉಪಾಧ್ಯಕ್ಷರಾದ ಚಂದ್ರ ಎಸ್ ಕುಂದರ್, ಹರ್ಷ ಮೈಂದನ್, ಜನಾರ್ಧನ ಕೋಟ್ಯಾನ್, ವಿಜಯ್ ಕುಂದರ್ ಉಪಸ್ಥಿತರಿದ್ದರು. ಮೂಲತಹ ಯೋಗಾಪಟು ಆಗಿರುವ ಗಂಗಾಧರ ಜಿ. ಅವರು, 2006 ರಲ್ಲಿ ಹವ್ಯಾಸಕ್ಕಾಗಿ ಈಜಿನಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ ವಿವಿಧ ಭಂಗಿಗಳಲ್ಲಿ ಈಜುವುದರಲ್ಲಿ ಪರಿಣತಿ ಪಡೆದು 2009 ರಿಂದ ರಾಜ್ಯ ಮಟ್ಟದಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸ್ಟೇಟ್, ಮಾಸ್ಟರ್ ಅಕ್ವಾಟಿಕ್ ಚಾಂಪಿಯನ್ ಶೀಪ್ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ 2009 ರಿಂದ 2019ರ ವರೆಗೆ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಒಟ್ಟು 31 ಚಿನ್ನ, 16ಬೆಳ್ಳಿ ಹಾಗೂ 9 ಕಂಚಿನ ಪದಕ ಪಡೆದಿರುತ್ತಾರೆ. ಗುಜರಾತಿನ ರಾಜ್ ಕೋಟ್, ಮಧ್ಯ ಪ್ರದೇಶದ ಬೋಪಾಲ್, ಆಂದ್ರದ ಸಿಕಂದರ ಬಾದ್, ವಿಶಾಖ ಪಟ್ಟಣ, ಉ.ಪ್ರ.ದ ಲಕ್ನೋ ಗಳಲ್ಲಿ ರಾಷ್ಟಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿ, ಮೂರು ಕಂಚಿನ ಪದಕಗಳನ್ನು ಪಡೆದು ಹಾಗೂ ಮಾಸ್ಟರ್ಸ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ನಡೆಸಿದ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕ ಪಡೆದು ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅಲ್ಲದೆ ಜಿಲ್ಲೆಯ ಅನೇಕ ವಿದ್ಯಾರ್ಥಿ, ಯುವಕ, ಯುವತಿಯರಿಗೆ ಈಜು ತರಬೇತಿ ನೀಡುತ್ತಿದ್ದಾರೆ. |