ಕಾರ್ಕಳ: ದ್ವಿಚಕ್ರ ವಾಹನಗಳ ನಡುವೆ ಅಪಘಾತ, ಸವಾರ ಮೃತ್ಯು
ಕಾರ್ಕಳ: ದ್ವಿಚಕ್ರ ವಾಹನಗಳ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ಕಾರ್ಕಳ ದಲ್ಲಿ ನಡೆದಿದೆ. ಶ್ರೀಕಾಂತ ಅಪಘಾತದಲ್ಲಿ ಮೃತರಾದವರು. ಇವರು ಜ.19ರಂದು, ಬೆಳ್ಮಣ್ ನಿಂದ ಸಾಂತೂರಿಗೆ ಹೋಗಲು ರಾಜ್ಯ ಹೆದ್ದಾರಿಯಲ್ಲಿ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ, ಪಡುಬಿದ್ರೆ ಕಡೆಯಿಂದ ಅತೀ ವೇಗವಾಗಿ ಬಂದ ಮೋಟಾರು ಸೈಕಲ್ ಸವಾರ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾರೆ.
ಪರಿಣಾಮ ಸವಾರ ಶ್ರೀಕಾಂತ ಹಾಗೂ ಸಹ ಸವಾರ ರಸ್ತೆಗೆ ಬಿದ್ದಿದ್ದು, ಶ್ರೀಕಾಂತರಿಗೆ ತಲೆಗೆ ಹಾಗೂ ರವಿಂದ್ರ ಪೂಜಾರಿರವರಿಗೆ ಎಡ ಕಾಲು ಮೂಳೆ ಮುರಿತವಾಗಿದೆ. ಅಲ್ಲದೇ ಅಪಘಾತವೆಸಗಿದ ಮೋಟಾರ್ ಸೈಕಲ್ ಸವಾರನಿಗೆ ಕೂಡಾ ಗಾಯವಾಗಿದೆ.
ಗಾಯಾಳುಗಳನ್ನು ಉಡುಪಿ ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಗಾಯಾಳು ಶ್ರೀಕಾಂತ ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.