ಮಹಾರಾಷ್ಟ್ರದಿಂದ ಬರುವವರಿಗೆ 14 ದಿನ ಗೃಹ ದಿಗ್ಬಂಧನ: ಶ್ರೀರಾಮುಲು

ಉಡುಪಿ: ಮಹಾರಾಷ್ಟ್ರದಿಂದ ಕರ್ನಾಟಕ ರಾಜ್ಯಕ್ಕೆ ಆಗಮಿಸುವವರಿಗೆ ಇನ್ನು ಮುಂದೆ ಏಳು ದಿನಗಳ ಕಾಲ ಸಾಂಸ್ಥಿಕ ದಿಗ್ಬಂಧನದ ಬದಲು 14 ದಿನಗಳ ಕಾಲ ಗೃಹದಿಗ್ಬಂಧನ ವಿಧಿಸಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ ಎಂದು ರಾಜ್ಯ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ತಿಳಿಸಿದ್ದಾರೆ.


ಉಡುಪಿ ಜಿಲ್ಲೆಗೆ ಭೇಟಿ ನೀಡಿದ ಸಚಿವರು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿರುವುದಾಗಿ ಹೇಳಿದರು. ಮಹಾರಾಷ್ಟ್ರದಿಂದ ಈವರೆಗೆ ಬಂದ 9009 ಜನರಲ್ಲಿ 908 ಮಂದಿಗೆ ಕೊರೊನಾ ವೈರಸ್ ತಗುಲಿದೆ. ಆದ್ದರಿಂದ ಇನ್ನು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವವರಿಗೆ 14 ದಿನಗಳ ಗೃಹ ದಿಗ್ಬಂಧನ ವಿಧಿಸಲಾಗುತ್ತದೆ. ಆ ಮನೆಗಳನ್ನು ಸೀಲ್‌ ಡೌನ್ ಮಾಡಲಾಗುತ್ತದೆ. ಒಂದು ವೇಳೆ ಗೃಹ ದಿಗ್ಬಂಧನದಲ್ಲಿರುವವರು ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಅವರ ಮೇಲೆ ಪ್ರಕರಣ ದಾಖಲಿಸಿ, ಸಾಂಸ್ಥಿಕ ದಿಗ್ಟಂಧನದಲ್ಲಿರಿಸಲಾಗುವುದು ಎಂದು ಸಚಿವ ಶ್ರೀರಾಮುಲು ತಿಳಿಸಿದರು.

ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸುವ ಸಂಪೂರ್ಣ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿ ಅವರಿಗೆ ಕೊಟ್ಟಿದ್ದೇವೆ. ಈಗಾಗಲೇ ನಿಯಮಾವಳಿಗಳನ್ನು ರೂಪಿಸಿ, ಆದೇಶವನ್ನು ಹೊರಡಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ 947 ಪ್ರಕರಣಗಳು ಕಂಡುಬಂದರೂ ಸಮುದಾಯದಲ್ಲಿ ಸೋಂಕು ಹರಡಿಲ್ಲ.
ಮೂರನೇ ಹಂತ ಪಾಸಾದರೆ ಮುಂದೆ ಸಮುದಾಯದಲ್ಲಿ ಕೋವಿಡ್ -19 ಯಾವುದೇ ತೊಂದರೆ ಮಾಡುವುದಿಲ್ಲ ಎಂದು ಸಚಿವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!