ದೇವಾಲಯಗಳಲ್ಲಿ ಪಿಕ್ ಪಾಕೆಟ್: 4 ಖತರ್ನಾಕ್ ಕಳ್ಳಿಯರ ಸಹಿತ ಆರು ಮಂದಿ ಅಂದರ್
ಮಂಗಳೂರು: ಕರಾವಳಿ ಕರ್ನಾಟಕ ಮತ್ತು ಗೋವಾದ ವಿವಿಧ ದೇವಾಲಯಗಳಲ್ಲಿ ಸಂಭವಿಸಿದ ಹಲವಾರು ಪಿಕ್ಪಾಕೆಟಿಂಗ್ಗೆ ಸಂಬಂಧಿಸಿದಂತೆ ನಾಲ್ಕು ಮಹಿಳೆಯರು ಸೇರಿದಂತೆ ಆರು ಮಂದಿ ಆರೋಪಿಗಳನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಯಮುನಪ್ಪ ಮುತ್ತಪ್ಪ ಚಲವಾಡಿ (55), ಪ್ರಕಾಶ್ ಚೆನ್ನಪ್ಪ (26), ಶೋಭಾ ಮುತ್ತಾಗರ್ (40), ಕುಮಾರಮ್ಮ ಮಾರುತಿ ಮುತ್ತಾಗರ್ (45), ಶಾಂತಮ್ಮ ಮುತ್ತಾಗರ್ (55), ಮತ್ತು ಚಂದ್ರಶೇಖರ್ ಶಿವರೆದಪ್ಪ (40) ಬಂಧಿತ ಆರೋಪಿಗಳು. ಬಂಧಿತರಿಂದ ಏಳು ಮೊಬೈಲ್ ಫೋನ್ಗಳು, 21540 ರೂ. ನಗದು, ಮತ್ತು ಕಳ್ಳತನಕ್ಕೆ ಬಳಸಿದ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇದೀಗ ಆರೋಪಿಗಳು, ಕರಾವಳಿ ಕರ್ನಾಟಕ ಮತ್ತು ಗೋವಾದ ದೇವಾಲಯಗಳಲ್ಲಿ ಹಲವಾರು ಪಿಕ್ಪಾಕೆಟಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಜ. 12 ರಂದು ಕಟೀಲಿನ ದುರ್ಗಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಯಶೋದ ಗೌಡ ಅವರು ತಮ್ಮ ಪರ್ಸನ್ನು ನಾಲ್ವರು ಮಹಿಳೆಯರು ಮತ್ತು ಇಬ್ಬರು ಯುವಕರು ಕದ್ದಿರುವುದಾಗಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳು, ಗೋವಾ, ಗೋಕರ್ಣ, ಮುರುಡೇಶ್ವರ, ಕೊಲ್ಲೂರು, ಶೃಂಗೇರಿ, ಕಟೀಲು ಮತ್ತು ಇತರ ಪ್ರಮುಖ ದೇವಾಲಯಗಳಲ್ಲಿನ ಕಳ್ಳತನ ನಡೆಸುತ್ತಿದ್ದರು ಎಂದು ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. |