ಕಾರ್ಕಳ: ನಿಂತಿದ್ದ ಬೈಕ್ಗೆ ಬಸ್ ಡಿಕ್ಕಿ – ಶಿಕ್ಷಕ ಮೃತ್ಯು
ಕಾರ್ಕಳ: ಖಾಸಗಿ ಬಸ್ ಡಿಕ್ಕಿ ಹೊಡೆದು ರಸ್ತೆ ಬದಿ ಬೈಕ್ ನಿಲ್ಲಿಸಿ ಮೊಬೈಲ್ ಸಂಭಾಷಣೆಯಲ್ಲಿದ್ದ ವ್ಯಕ್ತಿ ಮೃತಪಟ್ಟ ಘಟನೆ ಇಂದು ನಿಟ್ಟೆ ಗ್ರಾಮದ ಫಾರೆವರ್ ಸಮೀಪ ನಡೆದಿದೆ. ನಿಟ್ಟೆ ಗ್ರಾಮದ ವಸಂತ ದೇವಾಡಿಗ (45) ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ.
ಇವರು ಇಂದು ನಿಟ್ಟೆ ಗ್ರಾಮದ ಫಾರೆವರ್ ಸಮೀಪ ಬೈಕ್ ನಿಲ್ಲಿಸಿ ಫೋನ್ನಲ್ಲಿ ಮಾತನಾಡುತ್ತಿದ್ದರು ಈ ವೇಳೆ ಕಾರ್ಕಳ ಕಡೆಯಿಂದ ಪಡುಬಿದ್ರೆ ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್ ರಸ್ತೆಯ ತೀರಾ ಎಡ ಭಾಗಕ್ಕೆ ಬಂದು ನಿಂತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ನಲ್ಲಿ ಕೂತು ಮಾತನಾಡುತ್ತಿದ್ದ ಶಿಕ್ಷಕ ವಸಂತ ದೇವಾಡಿಗ ಅವರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.
ಈ ವೇಳೆ ಗಂಭೀರ ಗಾಯಗೊಂಡಿದ್ದ ವಸಂತ ಅವರನ್ನು ತಕ್ಷಣ ಕಾರ್ಕಳದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.