70 ದಿನಗಳ ಲಾಕ್‌ಡೌನ್‌ ನಿಷ್ಪ್ರಯೋಜಕ, ಆತ್ಮವನ್ನೇ ಕೊಂದ ಬಿಜೆಪಿ: ಸಿದ್ದರಾಮಯ್ಯ

ಬೆಂಗಳೂರು: ‘ಕೊರೊನಾ ಸೋಂಕು ನಿಯಂತ್ರಿಸಲು ಘೋಷಿಸಲಾಗಿದ್ದ 70 ದಿನಗಳ ಲಾಕ್‌ಡೌನ್‌ ನಿಷ್ಪ್ರಯೋಜಕವಾದುದು. ರಾಜ್ಯದಲ್ಲಿ ಪ್ರತಿ ಸಂತ್ರಸ್ತ ಕುಟುಂಬಕ್ಕೆ ₹10 ಸಾವಿರ ನೆರವನ್ನಾದರೂ ಸರ್ಕಾರ ಘೋಷಿಸಬೇಕಿತ್ತು’ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. 

‘ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣ, ನಿರ್ವಹಣೆ, ಸಂತ್ರಸ್ತರಿಗೆ ಪರಿಹಾರ ಮತ್ತು ಆರ್ಥಿಕ ಪುನಶ್ಚೇತನ’ ಕುರಿತು ಸಿಪಿಐ (ಎಂ) ಬೆಂಗಳೂರು ಘಟಕ ಸೋಮವಾರ ಆಯೋಜಿಸಿದ್ದ ವಿರೋಧಪಕ್ಷಗಳ ನಾಯಕರ ಆನ್‌ಲೈನ್‌ ಸಂವಾದದಲ್ಲಿ ಮಾತನಾಡಿದ ಅವರು, ‘ಕೋವಿಡ್‌ ಪರಿಹಾರ ಕಾರ್ಯಗಳಿಗೆ ಕೇರಳ ಸರ್ಕಾರ ₹20 ಸಾವಿರ ಕೋಟಿ ಘೋಷಿಸಿದ್ದರೆ, ತೆಲಂಗಾಣ ₹35 ಸಾವಿರ ಕೋಟಿ ತೆಗೆದಿಟ್ಟಿದೆ. ರಾಜ್ಯ ಸರ್ಕಾರ ₹10 ಸಾವಿರ ಕೋಟಿ ಖರ್ಚು ಮಾಡಿದ್ದರೂ, ಸಂತ್ರಸ್ತರ ಪ್ರತಿ ಕುಟುಂಬಕ್ಕೆ ₹10 ಸಾವಿರ ನೀಡಬಹುದಾಗಿತ್ತು’ ಎಂದರು. 

‘ನಗರಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದವರ ಪೈಕಿ 13 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಬಾದಾಮಿ ಕ್ಷೇತ್ರಕ್ಕೆ ಮರಳಿದ್ದಾರೆ. ಇವರಲ್ಲಿ 2 ಸಾವಿರ ಜನರಿಗೆ ಮಾತ್ರ ಉದ್ಯೋಗ ಖಾತ್ರಿಯಡಿ ಕೆಲಸ ನೀಡಲಾಗಿದೆ. ಆತ್ಮನಿರ್ಭರದ ಹೆಸರಲ್ಲಿ ಬಿಜೆಪಿಯವರು ದೇಶದ ಆತ್ಮವನ್ನೇ ಕೊಂದಿದ್ದಾರೆ’ ಎಂದು ದೂರಿದರು.

ಸಿಪಿಐ ರಾಜ್ಯ ಕಾರ್ಯದರ್ಶಿ ಸಾಥಿ ಸುಂದರೇಶ್‌, ‘ಬೇರೆ ದೇಶಗಳಲ್ಲಿ ಡಿಸೆಂಬರ್‌ನಲ್ಲಿಯೇ ಕೊರೊನಾ ಸೋಂಕು ಹರಡಿತ್ತು. ವಿದೇಶದಿಂದ ಭಾರತಕ್ಕೆ ಬರುವವರನ್ನು ತಡೆಯುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲಿಲ್ಲ’ ಎಂದು ದೂರಿದರು. 

ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್. ವಿಮಲಾ, ‘ನಷ್ಟದ ನೆಪದಲ್ಲಿ ಗಾರ್ಮೆಂಟ್ಸ್‌ ಕಾರ್ಖಾನೆಗಳನ್ನು ಮುಚ್ಚಲಾಗುತ್ತಿದ್ದು, ಮಹಿಳೆಯರನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. ಈ ಕಾರ್ಖಾನೆಗಳನ್ನು ಮುಚ್ಚಬಾರದು, ಮಹಿಳೆಯರಿಗೆ ಉದ್ಯೋಗ ಭದ್ರತೆ ನೀಡಬೇಕು ಎಂದು ಸರ್ಕಾರದ ಮೇಲೆ ಒತ್ತಡ ತರಬೇಕು’ ಎಂದು ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!