ಮಲ್ಪೆ: ಕಾಲು ಜಾರಿ ಮೀನುಗಾರ ಮೃತ್ಯು
ಮಲ್ಪೆ: ಆಳ ಸಮುದ್ರ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಸಮುದ್ರದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೀನುಗಾರ ಮೃತಪಟ್ಟ ಘಟನೆ ಮಲ್ಪೆ ಬಂದರಿನಿಂದ 13 ನಾಟಿಕಲ್ ಮೈಲ್ ದೂರದಲ್ಲಿ ನಡೆದಿದೆ. ಮೃತ ಮೀನುಗಾರರನ್ನು ಸುಧಾಕರ ವೆಂಕಣ್ಣ ಹೊಸಕಟ್ಟಿ (39) ಎಂದು ಗುರುತಿಸಲಾಗಿದೆ.
ಇವರು ಜ 10 ರಂದು ಶ್ರೀ ತ್ರಿಜಲ್ 370 ಎಂಬ ಬೋಟಿನಲ್ಲಿ ಇತರ ಮೀನುಗಾರರಾದ ಉಮೇಶ್, ರಾಮ, ಶರತ್, ಚುಡಾಮಣಿ ಇವರೊಂದಿಗೆ ಮಲ್ಪೆ ಬಂದರಿನಿಂದ ಬೆಳಗ್ಗೆ 4 ಗಂಟೆ ಸುಮಾರಿಗೆ ಮೀನುಗಾರಿಕೆಗೆ ಹೊರಟಿದ್ದರು. ಜ. 13 ರಂದು ಬೆಳಿಗ್ಗೆ ಬಂದರಿನಿಂದ 13 ನಾಟಿಕಲ್ ಮೈಲ್ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ, ಬೋಟಿನೊಳಗಿದ್ದ ಬಲೆಯನ್ನು ಎಳೆಯುತ್ತಿದ್ದ ವೇಳೆ ಸುಧಾಕರ ಅವರು ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರದ ನೀರಿಗೆ ಬಿದ್ದಿದ್ದಾರೆ.
ಈ ಸಂದರ್ಭ ಬೋಟಿನೊಳಗಿದ್ದ ಇತರೆ ಮೀನುಗಾರರು ಸುಧಾಕರ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದರೂ ಸುಧಾಕರ ವೆಂಕಣ್ಣ ಅವರು ಪತ್ತೆಯಾಗಿರಲಿಲ್ಲ. ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಸುಧಾಕರ ಅವರನ್ನು ಹುಡುಕಾಟ ನಡೆಸುತ್ತಿದ್ದ ಸಂದರ್ಭ ಜ. 15 ರಂದು ಮಲ್ಪೆ ಬಂದರಿನಿಂದ 10 ನಾಟಿಕಲ್ ಮೈಲ್ ದೂರದಲ್ಲಿ ಮಧ್ಯಾಹ್ನದ ವೇಳೆಗೆ ಸುಧಾಕರ ವೆಂಕಣ್ಣ ಅವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.